
ಮೈಸೂರು: ಪ್ರಸಿದ್ಧ ಚಾಮುಂಡೇಶ್ವರಿ ದೇವಸ್ಥಾನ ಮತ್ತು ಚಾಮುಂಡಿ ಬೆಟ್ಟ ಹಿಂದೂಗಳಿಗೆ ಮಾತ್ರ ಸೇರಿಲ್ಲ ಎಂದು ಹೇಳುವ ಮೂಲಕ ಆಡಳಿತಾರೂಢ ಕಾಂಗ್ರೆಸ್, ಚಾಮುಂಡೇಶ್ವರಿ ದೇವಸ್ಥಾನವನ್ನು "ಟೂಲ್‌ಕಿಟ್" ಆಗಿ ಬಳಸುತ್ತಿದೆ ಎಂದು ಬಿಜೆಪಿ ಹಿರಿಯ ನಾಯಕ ಆರ್. ಅಶೋಕ್ ಅವರು ಭಾನುವಾರ ಆರೋಪಿಸಿದ್ದಾರೆ.
ಇಂದು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಗೆ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಸರ್ಕಾರಕ್ಕೆ ತಾಯಿ ಚಾಮುಂಡೇಶ್ವರಿ ಒಳ್ಳೆ ಬುದ್ದಿ ಕೊಡಲಿ ಎಂದು ಬೇಡಿಕೊಂಡಿರುವುದಾಗಿ ತಿಳಿಸಿದರು.
"ಚಾಮುಂಡೇಶ್ವರಿ ದೇವಸ್ಥಾನವು ಹಿಂದೂಗಳಿಗೆ ಮಾತ್ರ ಸೇರಿಲ್ಲ ಎಂದು ಕಾಂಗ್ರೆಸ್ ಸರ್ಕಾರ ಹೇಳಿದೆ. ಹಾಗಾದರೆ ಈ ದೇವಸ್ಥಾನ ಯಾರಿಗೆ ಸೇರಿದ್ದು? ನಿಮಗೆ ಧೈರ್ಯವಿದ್ದರೆ, ನೀವು ಯಾವುದೇ ಮಸೀದಿಯ ಮುಂದೆ ಹೋಗಿ ಅದು ಮುಸ್ಲಿಮರಿಗೆ ಸೇರಿಲ್ಲ ಎಂದು ಹೇಳುತ್ತೀರಾ?" ಅಶೋಕ್ ಪ್ರಶ್ನಿಸಿದರು.
ಪದೇ ಪದೇ ಹಿಂದೂ ದೇವಾಲಯಗಳ ಟಾರ್ಗೆಟ್ ಯಾಕೆ? ಚುನಾವಣೆ ಬಂದಾಗ ವೋಟಿನ ಪಾಲಿಟಿಕ್ಸ್ ಮಾಡಿ. ಚುನಾವಣೆ ವೇಳೆ ಮುಸಲ್ಮಾನರ ಮೂಗಿಗೆ ತುಪ್ಪ ಸುರಿಯಿರಿ. ಆದರೆ ಈಗ ಯಾಕೆ ವೋಟಿನ ಓಲೈಕೆ ರಾಜಕಾರಣ? ಚಾಮುಂಡಿ ಬೆಟ್ಟದ ಬಗ್ಗೆ ಪದೇ ಪದೇ ಮಾತನಾಡಿದ್ರೆ ಚಾಮುಂಡೇಶ್ವರಿ ಚಲೋ ಕೂಡ ಮಾಡ್ತೀವಿ ಎಂದು ಆರ್ ಅಶೋಕ್ ಎಚ್ಚರಿಕೆ ನೀಡಿದರು.
"ಧರ್ಮಸ್ಥಳದ ವಿರುದ್ಧದ ಅಪಪ್ರಚಾರ ಮತ್ತು ಪಿತೂರಿಯ ವಿರುದ್ಧ ನಾವು ಧರ್ಮಸ್ಥಳ ಚಲೋ ಮಾಡುತ್ತಿದ್ದೇವ. ಚಾಮುಂಡೇಶ್ವರಿ ದೇವಸ್ಥಾನವು ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಎಂಬ ನಿಲುವನ್ನು ಈ ಸರ್ಕಾರ ತೆಗೆದುಕೊಂಡರೆ, ನಾವು ಚಾಮುಂಡೇಶ್ವರಿ ಚಲೋ ಮಾಡಬೇಕಾಗುತ್ತದೆ ಎಂದರು.
ಅಯೋಧ್ಯೆ ರಾಮಮಂದಿರಕ್ಕಾಗಿ ಹಿಂದೂಗಳು ಸುಮಾರು 500 ವರ್ಷಗಳಿಂದ ಹೋರಾಡುತ್ತಿದ್ದಾರೆ ಮತ್ತು ಈಗ ಅಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ ಎಂದ ಬಿಜೆಪಿ ನಾಯಕ, "ನಿಮ್ಮ ಟೂಲ್‌ಕಿಟ್‌ನ ಭಾಗವಾಗಿ ಚಾಮುಂಡೇಶ್ವರಿ ದೇವಾಲಯವನ್ನು ಗುರಿಯಾಗಿಸಿಕೊಂಡರೆ, ನಿಮ್ಮ(ಕಾಂಗ್ರೆಸ್) ಅಂತ್ಯ ಇಲ್ಲಿಂದಲೇ ಪ್ರಾರಂಭವಾಗುತ್ತದೆ" ಎಂದು ಎಚ್ಚರಿಸಿದರು.
Advertisement