

ಶಿವಮೊಗ್ಗ: ದೇವೇಗೌಡರನ್ನು ಯಾವುದೇ ಸ್ವಾಮೀಜಿ ಮುಖ್ಯಮಂತ್ರಿ ಮಾಡಿರಲಿಲ್ಲ. ಸ್ವಾಮೀಜಿಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಿದ್ದರೆ, ಅವರು 1977ರಲ್ಲಿಯೇ ಮುಖ್ಯಮಂತ್ರಿ ಆಗುತ್ತಿದ್ದರು. 1994ರವರೆಗೆ ಕಾಯುವ ಅಗತ್ಯ ಇರಲಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಡಿಸಿಎಂ ಡಿ.ಕೆ ಶಿವಕುಮಾರ್ ಅವರಿಗೆ ತಿರುಗೇಟು ನೀಡಿದ್ದಾರೆ.
ದೇವೇಗೌಡರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿನ ಶ್ರಮ ಯಾರೂ ಚರ್ಚೆ ಮಾಡುವಂತಹದ್ದಲ್ಲ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿ ಎಂದು ಯಾವ ಸ್ವಾಮೀಜಿ ಆಗ ಹೇಳಿಕೆ ನೀಡಿರಲಿಲ್ಲ. ಸಭೆ ಕೂಡ ಮಾಡಿರಲಿಲ್ಲ. ಪಾಪ ಈಗ ಅವರು (ಡಿ.ಕೆ.ಶಿವಕುಮಾರ್) ಹಾಗೆ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದರು.
ನನ್ನ ತಂದೆ ದೇವೇಗೌಡರು ಇತರರಂತೆ ಅವಕಾಶವಾದಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದರೆ, ಅವರು 1977 ರಲ್ಲಿಯೇ ಮುಖ್ಯಮಂತ್ರಿಯಾಗುತ್ತಿದ್ದರು. ರಾಜಕೀಯ ಮೈತ್ರಿ ಅಥವಾ ವೈಫಲ್ಯಗಳನ್ನು ಸಮರ್ಥಿಸಿಕೊಳ್ಳಲು ಸ್ವಾಮೀಜಿಗಳನ್ನು ರಾಜಕೀಯ ಸಂಘರ್ಷಗಳಿಗೆ ಎಳೆಯಬಾರದು ಎಂದು ಅವರು ಪ್ರತಿಪಾದಿಸಿದರು. ನಮ್ಮ ಕಡೆಯಿಂದ ತಪ್ಪುಗಳು ಸಂಭವಿಸುತ್ತವೆ. ಅದಕ್ಕಾಗಿ ಸ್ವಾಮೀಜಿಗಳನ್ನು ಬೀದಿಗೆ ಏಕೆ ಎಳೆಯಬೇಕು.
1994 ರಲ್ಲಿ ದೇವೇಗೌಡರು ಯಾವುದೇ ಧಾರ್ಮಿಕ ಬೆಂಬಲದಿಂದಲ್ಲ, ಬದಲಾಗಿ ರಾಜ್ಯಾದ್ಯಂತ ರಾಜಕೀಯ ಬೆಂಬಲದಿಂದ ಮುಖ್ಯಮಂತ್ರಿಯಾದರು ಎಂದು ಅವರು ಸ್ಮರಿಸಿದರು, 2018 ರಲ್ಲಿ ಕಾಂಗ್ರೆಸ್-ಜೆಡಿ(ಎಸ್) ಒಕ್ಕೂಟವನ್ನು ಉಳಿಸಲು ತಾವು ಶ್ರಮಿಸಿರುವುದಾಗಿ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ರಾಜಕೀಯವಾಗಿ ಯಾರು ನನ್ನ ನಂಬಿಸಿ ಕತ್ತು ಕೊಯ್ದರು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ದೇವರಿಗೂ ತಿಳಿದಿದೆ. ನಿಷ್ಠೆಯ ಬಗ್ಗೆ ಮಾತನಾಡಬೇಡಿ ಎಂದು ಖಡಕ್ ತಿರುಗೇಟು ನೀಡಿದ್ದಾರೆ.
ಮುಖ್ಯಮಂತ್ರಿ ಸ್ಥಾನದ ಗುದ್ದಾಟದಲ್ಲಿ ಈ ಸರ್ಕಾರದ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ. ತೆರಿಗೆ ಸಂಗ್ರಹದಲ್ಲಿ ಈ ಆರ್ಥಿಕ ವರ್ಷದಲ್ಲಿ ₹15,000 ಕೋಟಿ ಖೋತಾ ಆಗಿದೆ. ತುಂಗಭದ್ರಾ ಜಲಾಶಯದ ಗೇಟ್ ಅಳವಡಿಸಿದ್ದ ಗುತ್ತಿಗೆದಾರನಿಗೆ ಇನ್ನೂ ಹಣ ಪಾವತಿಸಿಲ್ಲ. ಖಾಸಗಿಯವರಿಂದ ಸಿಎಸ್ಆರ್ ನಿಧಿ ಸಂಗ್ರಹ ಮಾಡಿ ಕೆಪಿಎಸ್ ಶಾಲೆಗಳನ್ನು ನಿರ್ಮಿಸುವ ಸ್ಥಿತಿಗೆ ಸರ್ಕಾರ ತಲುಪಿದೆ’ ಎಂದು ಟೀಕಿಸಿದರು.
Advertisement