

ಬೆಂಗಳೂರು: ನಾಯಕತ್ವ ಬದಲಾವಣೆ ಹಾಗೂ ಕೊಟ್ಟ ಮಾತಿನ ವಿಚಾರ ಕಾಂಗ್ರೆಸ್ನಲ್ಲಿ ಇನ್ನೂ ಬಗೆಹರಿಯದ ವಿಷಯವಾದಂತಿದೆ.
ಹೈಕಮಾಂಡ್ ಸೂಚನೆಯಂತೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಕಾವೇರಿ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಸಭೆ ನಡೆಸಿ ಗೊಂದಲವನ್ನ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಈ ಬೆನ್ನಲ್ಲೆ ಮತ್ತೊಂದು ಬ್ರೇಕ್ ಫಾಸ್ಟ್ ಮೀಟಿಂಗ್ ಆಯೋಜನೆಯಾಗಿದೆ. ಈ ಬಾರಿ ಡಿಕೆ ಶಿವಕುಮಾರ್ ತಮ್ಮ ಮನೆಯಲ್ಲಿ ಬ್ರೇಕ್ ಫಾಸ್ಟ್ ಆಯೋಜಿಸಿದ್ದು ಸಿಎಂ ಭಾಗಿಯಾಗಲಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರನ್ನು ಉಪಹಾರಕ್ಕಾಗಿ ಮನೆಗೆ ಆಹ್ವಾನಿಸಿರುವುದರ ಬಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಅದು ನನಗೂ ಸಿಎಂ ಗೂ ಸಂಬಂಧಪಟ್ಟ ವಿಚಾರ, ನಾವಿಬ್ಬರೂ ಬ್ರದರ್ಸ್ ತರಹ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನಿಮ್ಮ ಒತ್ತಡಕ್ಕಾಗಿ ನಾವು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದು ಅಷ್ಟೇ, ನಮಗೆ ಅವಶ್ಯಕತೆ ಇರಲಿಲ್ಲ. ನೀವು ಹೇಳುತ್ತಿರುವ ರೀತಿಯಲ್ಲಿ ಯಾವುದೇ ಗುಂಪು ಇಲ್ಲ ಎಂದು ಹೇಳಿದ್ದಾರೆ.
ನನ್ನ ಜೊತೆ 140 ಜನ ಶಾಸಕರಿದ್ದಾರೆ. ಯಾರೂ ಹುಟ್ಟುವಾಗ ಒಬ್ಬರೇ ಹುಟ್ಟುತ್ತಾರೆ, ಸಾಯುವಾಗ ಒಬ್ಬರೇ ಇರುತ್ತೇವೆ. ಪಕ್ಷ ಎಂದ ಮೇಲೆ ಎಲ್ಲರನ್ನೂ ಒಟ್ಟಿಗೆ ಮುನ್ನಡೆಸುತ್ತೇವೆ. ಈ ವಿಷಯವಾಗಿ ನೀವೇನೂ ಚಿಂತೆ ಮಾಡಬೇಡಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಆದರೆ, ಸಿದ್ದರಾಮಯ್ಯ ಅವರು ಇನ್ನೂ ಔಪಚಾರಿಕ ಆಹ್ವಾನವನ್ನು ಸ್ವೀಕರಿಸಿಲ್ಲ ಮತ್ತು ಅದನ್ನು ಸ್ವೀಕರಿಸಿದ ನಂತರ ಮುಂದುವರಿಯುವುದಾಗಿ ಹೇಳಿದರು.
Advertisement