

ಬೆಂಗಳೂರು: ಈ ಹಿಂದೆ 2016 ಮುಖ್ಯಮಂತ್ರಿಯಾಗಿದ್ದಾಗ ಹ್ಯೂಬ್ಲೋಟ್ ವಾಚಿನಿಂದ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗ ಮತ್ತೊಮ್ಮೆ ಕಾರ್ಟಿಯರ್ ವಾಚಿನಿಂದ ವಿವಾದಕ್ಕೆ ಸಿಲುಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನಡುವೆ ಸಿಎಂ ಪಟ್ಟಕ್ಕಾಗಿ ನಡೆಯುತ್ತಿರುವ ಹಗ್ಗಜಗ್ಗಾಟಕ್ಕೆ ತಾತ್ಕಾಲಿಕ ಬ್ರೇಕ್ ಹಾಕುವಲ್ಲಿ ಹೈಕಮಾಂಡ್ ಯಶಸ್ವಿಯಾಗಿದೆ.
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ಇಂದು ಎರಡನೇ ಬಾರಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುವ ಮೂಲಕ ಮತ್ತೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಆದರೆ ಈ ಉಭಯ ನಾಯಕರು ಕಟ್ಟಿರುವ ಒಂದೇ ಕಂಪನಿಯ ಒಂದೇ ತರಹದ ವಾಚ್ ತೀವ್ರ ಚರ್ಚೆಗೆ ಕಾರಣವಾಗಿದೆ. ಒಗ್ಗಟ್ಟು ಪ್ರದರ್ಶಿಸಲು ಇಬ್ಬರು ನಾಯಕರು ಒಂದೇ ತರಹದ ವಾಚ್ ಕಟ್ಟಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಕಾರಣ ಇಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಇಬ್ಬರು ನಾಯಕರು ಕಾರ್ಟಿಯರ್(cartier) ಬ್ರ್ಯಾಂಡ್ ವಾಚ್ ಕಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾಧ್ಯಮಗಳ ಕ್ಯಾಮೆರಾದಲ್ಲಿ ಇಬ್ಬರ ವಾಚ್ ಒಂದೇ ರೀತಿ ಹಾಗೂ ಒಂದೇ ಬ್ರ್ಯಾಂಡ್ ಇರುವುದು ಗೋಚರಿಸುತ್ತಿದೆ. ಆದರೆ ಪ್ರಶ್ನೆ ಇದಲ್ಲ, ಇದರ ಬೆಲೆ, ಆ ಕಂಪನಿಯ ವೆಬ್‌ಸೈಟ್‌ನಲ್ಲಿ ಒಂದು ವಾಚಿಗೆ ಬರೋಬ್ಬರಿ 43 ಲಕ್ಷ ರೂಪಾಯಿ ಎಂದು ಹೇಳುತ್ತಿದೆ.
ಈ ವಾಚ್ ನ ವಿಶೇಷತೆ ಏನು?
ಕಾರ್ಟಿಯರ್ ಅತ್ಯಂತ ಲಕ್ಷುರಿ ವಾಚ್ ಬ್ರ್ಯಾಂಡ್ ಆಗಿದ್ದು, ಸ್ಯಾಂಟೋಸ್ ಡೇ ಕಾರ್ಟಿಯರ್ ವಾಚ್ ಎಡಿಶನ್ ಇದಾಗಿದೆ. ಈ ವಾಚ್‌ನಲ್ಲಿ ಹಲವು ವಿಶೇಷತೆಗಳಿವೆ. ಕಾರಣ ಈ ವಾಚ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಬಳಕೆ ಮಾಡಲಾಗಿದೆ. ಇದರ ಡೈಯಲ್, ಚೈನ್ ಸೇರಿದಂತೆ ಬಹುತೇಕ ಭಾಗದಲ್ಲಿ 750/1000 ಕೇಸ್ ಚಿನ್ನ ಬಳಕೆ ಮಾಡಲಾಗಿದೆ. ಇನ್ನು ಬೆಳ್ಳಿ ಒಪಾನಲೈನ್ ಡೈಯಲ್ ಬಳಕೆ ಮಾಡಲಾಗಿದೆ. ಇದರ 7 ಸೈಡೆಡ್ ಕ್ರೌನ್‌ನಲ್ಲಿ ರೋಸ್ ಗೋಲ್ಡ್ ಬಳಕೆ ಮಾಡಲಾಗಿದೆ.
ಸಿಎಂ, ಡಿಸಿಎಂ ವಿರುದ್ಧ ಬಿಜೆಪಿ ವಾಗ್ದಾಳಿ
ಕಾರ್ಟಿಯರ್ ವಾಚ್ ಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರತಿಪಕ್ಷ ಬಿಜೆಪಿ, ಅಂದು 70 ಲಕ್ಷ ರೂ ವಾಚ್, ಇಂದು 43 ಲಕ್ಷ ರೂ. ವಾಚ್! ಕೈ ಗಡಿಯಾರ ಬದಲಾಗಿದೆ ಹೊರತು, ಮಜಾವಾದಿ ಮನಸ್ಥಿತಿ ಬದಲಾಗಿಲ್ಲ. ಸಮಾಜವಾದದ ಮುಖವಾಡ ಧರಿಸಿ ಮಜಾವಾದದ ಜೀವನ ನಡೆಸುತ್ತಿರುವ ಸಿದ್ದರಾಮಯ್ಯ ಅವರೇ, ಇದೇನಾ ನಿಮ್ಮ ಸಾಮಾಜಿಕ ನ್ಯಾಯ? ಎಂದು ಎಕ್ಸ್ ನಲ್ಲಿ ಪ್ರಶ್ನಿಸಿದೆ.
Advertisement