

ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಮೊದಲ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಇಂದು ಮಂಗಳವಾರ ಡಿಸಿಎಂ ಡಿ ಕೆ ಶಿವಕುಮಾರ್ ಅವರ ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಯುತ್ತಿದೆ.
ಸಿಎಂ ಸಿದ್ದರಾಮಯ್ಯ ಇಂದು ಉಪಾಹಾರ ಕೂಟಕ್ಕೆ ಡಿ ಕೆ ಶಿವಕುಮಾರ್ ಅವರ ನಿವಾಸಕ್ಕೆ ಆಗಮಿಸಿದರು. ಅಲ್ಲಿ ಅವರನ್ನು ಡಿ ಕೆ ಶಿವಕುಮಾರ್ ಮತ್ತು ಅವರ ಸೋದರ ಮಾಜಿ ಸಂಸದ ಡಿ.ಕೆ. ಸುರೇಶ್ ಸ್ವಾಗತಿಸಿದರು.
ನಿವಾಸದೊಳಗೆ ಡಿ ಕೆ ಶಿವಕುಮಾರ್ ಅವರು ಡೈನಿಂಗ್ ಟೇಬಲ್ ಮೇಲೆ ತಿಂಡಿಯನ್ನಿಟ್ಟು ಸಿಎಂ ಅವರಿಗೆ ಬಡಿಸುತ್ತಿರುವ, ಸಿದ್ದರಾಮಯ್ಯನವರು ಇಡ್ಲಿ ಸವಿಯುತ್ತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಚರ್ಚೆಯಾಗಿಯೇ ಉಳಿದ ಸಿಎಂ ಹುದ್ದೆ
ಕಳೆದ ಶನಿವಾರ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಉಭಯ ನಾಯಕರು ಬ್ರೇಕ್ ಫಾಸ್ಟ್ ಮುಗಿಸಿ ಜಂಟಿಯಾಗಿ ಮಾಧ್ಯಮಗಳ ಮುಂದೆ ಸುದ್ದಿಗೋಷ್ಠಿ ನಡೆಸಿ ನಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ, ಇರುವುದೂ ಇಲ್ಲ, ಹೈಕಮಾಂಡ್ ಹೇಳಿದಂತೆ ಮುಂದುವರಿಯುತ್ತಿದ್ದೇವೆ ಎಂದು ಪುನರುಚ್ಛರಿಸಿದರೂ ನಾಯಕತ್ವ ಬಿಕ್ಕಟ್ಟು ಬಗೆಹರಿದಂತೆ ಕಂಡುಬರಲೇ ಇಲ್ಲ.
ಹೈಕಮಾಂಡ್ ಮಟ್ಟದಲ್ಲಿ ಎರಡೂವರೆ ವರ್ಷಗಳ ಹಿಂದೆ ಆದ ಒಪ್ಪಂದದಂತೆ ಸಿದ್ದರಾಮಯ್ಯನವರು ಸಿಎಂ ಹುದ್ದೆಯನ್ನು ಡಿ ಕೆ ಶಿವಕುಮಾರ್ ಗೆ ಬಿಟ್ಟುಕೊಡುತ್ತಾರೆ. ಸದ್ಯ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಹೀಗಾಗಿ ಹೈಕಮಾಂಡ್ ಸೂಚನೆಯಂತೆ ಸುಮ್ಮನಿದ್ದಾರೆ, ಮುಂದಿನ ವರ್ಷ ಸಂಕ್ರಾಂತಿ ವೇಳೆಗೆ ಮತ್ತೆ ನಾಯಕತ್ವ ಬಿಕ್ಕಟ್ಟು ಉಲ್ಭಣವಾಗಬಹುದು ಎಂದೇ ಮಾಧ್ಯಮಗಳಲ್ಲಿ ಸುದ್ದಿಯಾಗಿವೆ.
ಇಂದಿನ ಮೀಟಿಂಗ್ ಕುತೂಹಲ
ಇಡ್ಲಿ-ನಾಟಿ ಚಿಕನ್ ಉಪಹಾರದ ಮೂಲಕ 'ಉತ್ತಮ ಆಡಳಿತ'ಕ್ಕೆ ಬದ್ಧತೆಯನ್ನು ಡಿಕೆ ಶಿವಕುಮಾರ್-ಸಿದ್ದರಾಮಯ್ಯ ತೋರಿಸಿದ್ದಾರೆ. ವಾರದಲ್ಲಿ ಇದು ಎರಡನೇ ಸುತ್ತಿನ ಬ್ರೇಕ್ ಫಾಸ್ಟ್ ಮೀಟಿಂಗ್ ಆಗಿದ್ದು ತೀವ್ರ ಕುತೂಹಲ ಕೆರಳಿಸಿದೆ.
Advertisement