

ಉತ್ತರ ಕನ್ನಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಕುರ್ಚಿ ಕದನ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಳ್ಳಲು ಇದೇನು ವ್ಯವಹಾರನಾ? ಎಂದುಮು ಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಅವರು ಶನಿವಾರ ಖಾರವಾಗಿಯೇ ಪ್ರಶ್ನಿಸಿದ್ದಾರೆ.
ಇಂದು ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಯರೆಡ್ಡಿ, 10 ರಿಂದ 12 ಶಾಸಕರು ಮಾತ್ರ ಡಿಕೆ ಶಿವಕುಮಾರ್ ಅವರು ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ. ಸ್ವತಃ ಡಿಕೆ ಶಿವಕುಮಾರ್ ಅವರೇ ನಾನು ಸಿಎಂ ಆಗುತ್ತೇನೆ ಎಂದು ಯಾವತ್ತೂ ಹೇಳಿಲ್ಲ. ಹೀಗಾಗಿ ಸಿಎಂ ಬದಲಾವಣೆ ಮುಗಿದ ಅಧ್ಯಾಯ ಎಂದರು.
ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಮತ್ತು ಶಾಸಕರು ನಿರ್ಧರಿಸುತ್ತಾರೆ. ನಾವು 136 ಶಾಸಕರಿದ್ದೇವೆ. ಅವರಲ್ಲಿ ಕೆಲವರು ಮಾತ್ರ ಡಿಕೆಶಿ ಸಿಎಂ ಆಗಲಿ ಎಂದು ಹೇಳುತ್ತಿದ್ದಾರೆ ಎಂದರು.
ಶಾಸಕಾಂಗ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ. ಅವರೇ ನಮಗೆ ನಾಯಕರು. ಐದು ವರ್ಷಗಳ ಕಾಲ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಶಾಸಕಾಂಗ ಸಭೆಯಲ್ಲಿ ಯಾವುದೇ ಷರತ್ತುಗಳಿರಲಿಲ್ಲ. ಅಧಿಕಾರ ಹಂಚಿಕೆ ಒಪ್ಪಂದ ಮಾಡಿಕೊಳ್ಳಲು ಇದೇನು ವ್ಯವಹಾರನಾ? ಸಿಎಂ ಬದಲಾವಣೆ ಮುಗಿದ ಅಧ್ಯಾಯ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
Advertisement