

ಬೆಳಗಾವಿ: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಬಗ್ಗೆ ಊಹಾಪೋಹಗಳ ನಡುವೆ ಒಂದು ವೇಳೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಸಂಪುಟಕ್ಕೆ ನಾನು ಸೇರುವುದಿಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ ಕೆಎನ್ ರಾಜಣ್ಣ ಹೇಳಿದ್ದಾರೆ. ರಹಸ್ಯ ಮತದಾನದ ಮೂಲಕ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರನ್ನಾಗಿ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ರಾಜೀನಾಮೆ ನೀಡುವವರೆಗೆ ನಾಯಕತ್ವದ ಸಮಸ್ಯೆ ಉದ್ಭವಿಸುವುದಿಲ್ಲ. ಸಿದ್ದರಾಮಯ್ಯಗೆ ಪರ್ಯಾಯವಾಗಿ ಬೇಕಿದ್ದರೆ ಗೃಹ ಸಚಿವ ಜಿ ಪರಮೇಶ್ವರ ಅವರನ್ನು ಬೆಂಬಲಿಸುವಂತೆ ಒತ್ತಾಯಿಸುತ್ತೇವೆ ಎಂದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಒಂದೇ ವೇಳೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾದರೆ ಅವರ ಸಂಪುಟದ ಭಾಗವಾಗುವುದಿಲ್ಲ ಎಂದರು. ಇನ್ನು ನಾಯಕತ್ವ ಬದಲಾವಣೆ ಪ್ರಶ್ನೆಗೆ ಸಿಎಂ ಸಿದ್ದರಾಮಯ್ಯ ಆಪ್ತರಾಗಿರುವ ಕೆಎನ್ ರಾಜಣ್ಣ, ಸಿಎಲ್‌ಪಿ ನಾಯಕನನ್ನು ಶಾಸಕರು ರಹಸ್ಯ ಮತದಾನದ ಮೂಲಕ ಐದು ವರ್ಷಕ್ಕೆ ಆಯ್ಕೆ ಮಾಡಲಾಗಿದೆ ಎಂದರು. ಒಂದು ವೇಳೆ ಸಿದ್ದರಾಮಯ್ಯ ಸಿಎಲ್‌ಪಿ ನಾಯಕತ್ವಕ್ಕೆ ರಾಜೀನಾಮೆ ನೀಡಿದರೆ, ಹೊಸ ವ್ಯಕ್ತಿಯ ಪ್ರಶ್ನೆ ಉದ್ಭವಿಸುತ್ತದೆ. ಅಲ್ಲಿಯವರೆಗೆ ಅಂತಹದ್ದೇನೂ ಇಲ್ಲ ಎಂದು ಹೇಳಿದರು. ನವೆಂಬರ್ 20ಕ್ಕೆ ಕಾಂಗ್ರೆಸ್ ಸರ್ಕಾರ ತನ್ನ ಐದು ವರ್ಷಗಳ ಅವಧಿಯ ಅರ್ಧವನ್ನು ತಲುಪಿದ ಬೆನ್ನಲ್ಲೇ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಊಹಾಪೋಹಗಳು ಕೇಳಿಬಂದ ಹಿನ್ನೆಲೆಯಲ್ಲಿ ಆಡಳಿತ ಪಕ್ಷದೊಳಗೆ ತಿಕ್ಕಾಟ ತೀವ್ರಗೊಂಡಿತ್ತು.
2023ರಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ 'ಅಧಿಕಾರ ಹಂಚಿಕೆ' ಒಪ್ಪಂದದಿಂದ ಈ ಊಹಾಪೋಹಕ್ಕೆ ಪುಷ್ಠಿ ಸಿಕ್ಕಿತು. ಆದಾಗ್ಯೂ, ಹೈಕಮಾಂಡ್ ಸೂಚನೆಯ ಮೇರೆಗೆ ಸಿಎಂ ಮತ್ತು ಉಪ ಮುಖ್ಯಮಂತ್ರಿ ಇಬ್ಬರೂ ಇತ್ತೀಚೆಗೆ ಪರಸ್ಪರ ನಿವಾಸಗಳಲ್ಲಿ ಉಪಾಹಾರ ಸಭೆಗಳನ್ನು ನಡೆಸಿದ್ದರು. ಇದು ಇಬ್ಬರ ನಡುವಿನ ನಾಯಕತ್ವದ ಜಗಳಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಸದ್ಯಕ್ಕೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುವ ಸೂಚನೆ ಸಿಕ್ಕಿದೆ.
2013ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಪರಮೇಶ್ವರ್ ಅವರು ಪಕ್ಷದ ಅಧ್ಯಕ್ಷರಾಗಿದ್ದರು. ಅಂದು ಸಿಎಂ ಅಭ್ಯರ್ಥಿಯಾಗಿ ಪರಮೇಶ್ವರ್ ಅವರನ್ನು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಆದರೆ ಅವರಿಗೆ ಅಧಿಕಾರ ಸಿಕ್ಕಿರಲಿಲ್ಲ. ಇನ್ನು ದಲಿತ ಮುಖ್ಯಮಂತ್ರಿ ಎಂಬ ಊಹಾಪೋಹವನ್ನು ನಾನು ಒಪ್ಪುವುದಿಲ್ಲ. ಆದರೆ ಅವರ ಸಾಮರ್ಥ್ಯ ಮತ್ತು ಪಕ್ಷ ನಿಷ್ಠೆ ಆಧಾರದ ಮೇಲೆ ಪರಮೇಶ್ವರ್ ಸಿಎಂ ಆಗಲೇಬೇಕು. ಯಾವುದೇ ಬದಲಾವಣೆಗಳಿದ್ದಲ್ಲಿ ಸಿದ್ದರಾಮಯ್ಯ ಅವರ ಬಣವು ಪರಮೇಶ್ವರ ಅಥವಾ ಅವರಲ್ಲಿನ ಇತರ ಹಿರಿಯ ನಾಯಕರನ್ನು ಮುಖ್ಯಮಂತ್ರಿ ಹುದ್ದೆಗೆ ಬೆಂಬಲಿಸುತ್ತದೆ ಎಂದರು.
Advertisement