

ಬೆಂಗಳೂರು: ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿದರೂ ಸಿಎಂ ಕುರ್ಚಿ ಕದನ ರಾಜ್ಯ ಕಾಂಗ್ರೆಸ್ ನಲ್ಲಿ ಇನ್ನೂ ನಿಂತಂತೆ ಕಾಣುತ್ತಿಲ್ಲ. ಬೆಳಗಾವಿ ಅಧಿವೇಶನ ಮಧ್ಯೆ ಸಿಎಂ ಕುರ್ಚಿ ಗುದ್ದಾಟ ಸದ್ದು ಮಾಡುತ್ತಿದೆ.
ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಬೆಳಗಾವಿಯಲ್ಲಿ ನಿನ್ನೆ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಯತೀಂದ್ರ ಹೇಳಿಕೆಯ ಬೆನ್ನಲ್ಲೇ ವಿರೋಧ ಪಕ್ಷಗಳು ಕೂಡ ಈ ವಿಷಯಕ್ಕೆ ಧ್ವನಿಗೂಡಿಸಿ, ಮುಖ್ಯಮಂತ್ರಿ ಬದಲಾವಣೆ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿವೆ.
ಈ ಹೇಳಿಕೆ ಕುರಿತು ಮಾಧ್ಯಮದವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ಕೇಳಿದರು. ಬೆಳಗಾವಿಗೆ ತೆರಳುವ ಮುನ್ನ ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ‘ಬಹಳ ಸಂತೋಷ, ಒಳ್ಳೆಯದಾಗಲಿ, ರಾಜ್ಯಕ್ಕೆ ಒಳ್ಳೆಯದಾಗಲಿ’ ಎಂದಷ್ಟೇ ಹೇಳಿದರು.
ಯತೀಂದ್ರ ಅವರ ಹೇಳಿಕೆ ಡಿ ಕೆ ಶಿವಕುಮಾರ್ ಅವರ ಬೆಂಬಲಿಗ ಶಾಸಕರನ್ನು ಕೆರಳಿಸಿದೆ. ಸಿಎಂ ಬದಲಾವಣೆ ನಿರ್ಧಾರ ಮಾಡುವುದು ಯತೀಂದ್ರ ಅವರಲ್ಲ. ಮುಖ್ಯಮಂತ್ರಿ ಬದಲಾವಣೆ ಮಾಡುವುದು ಹೈಕಮಾಂಡ್,ಯತೀಂದ್ರ ಅವರು ಮಾಡುವುದಿದ್ದರೆ ಅವರ ಹೇಳಿಕೆ ಪುರಸ್ಕರಿಸಬಹುದಾಗಿತ್ತು. ಮುಖ್ಯಮಂತ್ರಿ ಬದಲಾವಣೆಯೇ ಅಥವಾ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆಯೇ ಎಂದು ಹೈಕಮಾಂಡ್ ಹೇಳಬೇಕು ಎಂದು ಚನ್ನಗಿರಿ ಶಾಸಕ ಬಸವರಾಜ ಶಿವಗಂಗಾ ಪ್ರತಿಕ್ರಿಯಿಸಿದ್ದಾರೆ.
ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಮಾಗಡಿ ಶಾಸಕ ಸಿ ಹೆಚ್ ಬಾಲಕೃಷ್ಣ, ಮಂಡ್ಯ ಶಾಸಕ ರವಿ ಗಣಿಗ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಹೊಸವರ್ಷ ಸಂಕ್ರಾಂತಿಗೆ ಸೂರ್ಯ ಪಥ ಬದಲಿಸುತ್ತಾನೆ. ಜನವರಿ 2ರ ನಂತರ ಮುಖ್ಯಮಂತ್ರಿ ಬದಲಾವಣೆ ಆಗುತ್ತದೋ ಇಲ್ಲವೋ ಎಂದು ನೋಡೋಣ ಎಂದಿದ್ದಾರೆ.
Advertisement