

ಬೆಳಗಾವಿ: ರಾಜ್ಯ ರಾಜಕಾರಣದಲ್ಲಿ ಅಧಿಕಾರ ಹಂಚಿಕೆಯ ಸದ್ದುಗದ್ದಲ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಸಂದರ್ಭದಲ್ಲಿ ಸಿಎಂ ಅಧಿಕಾರ ಹಂಚಿಕೆಯ ಸೂಕ್ಷ್ಮ ವಿಷಯದ ಬಗ್ಗೆ ಯಾವುದೇ ಸಾರ್ವಜನಿಕ ಅಥವಾ ಆಂತರಿಕ ಹೇಳಿಕೆಗಳನ್ನು ನೀಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಪಕ್ಷದ ಶಾಸಕರಿಗೆ ಎಚ್ಚರಿಕೆ ನೀಡಿದ್ದಾರೆ.
ಮಾಧ್ಯಮಗಳ ಮುಂದೆ ಶಾಸಕರು ತಮ್ಮ ಮನಸೋ ಇಚ್ಛೆ ಹೇಳಿಕೆಗಳನ್ನು ನೀಡುವುದರಿಂದ ಪಕ್ಷ ಮತ್ತು ಸರ್ಕಾರದೊಳಗೆ ಅನಗತ್ಯ ಗೊಂದಲ ಉಂಟಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಈ ನಿರ್ದೇಶನ ಬಂದಿದ್ದು, ಸಿಎಂ ತಮ್ಮ ಸಹೋದ್ಯೋಗಿಗಳಿಗೆ ಅಧಿಕಾರ ಹಂಚಿಕೆ ವ್ಯವಸ್ಥೆಗಳ ಬಗ್ಗೆ ಚರ್ಚಿಸುವುದನ್ನು ನಿಲ್ಲಿಸಿ. ಸಡಿಲ ಹೇಳಿಕೆಗಳನ್ನು ನೀಡುವ ಮೂಲಕ ಗೊಂದಲ ಸೃಷ್ಟಿಸಬೇಡಿ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಸರ್ಕಾರವು ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷಗಳನ್ನು ಸಮರ್ಥವಾಗಿ ಎದುರಿಸಲು ತಯಾರಿ ನಡೆಸುತ್ತಿರುವ ಸಮಯದಲ್ಲಿ ನಾಯಕತ್ವದ ಪ್ರಶ್ನೆಯು ಸಾರ್ವಜನಿಕ ಪ್ರದರ್ಶನವಾಗಬಾರದು ಎಂದು ಸಿದ್ದರಾಮಯ್ಯ ಒತ್ತಿ ಹೇಳಿದರು ಎಂದು ಸಭೆಯಲ್ಲಿದ್ದ ಮೂಲಗಳು ತಿಳಿಸಿವೆ. ವಿಶೇಷವಾಗಿ ವಿರೋಧ ಪಕ್ಷಗಳು ಸರ್ಕಾರದ ಮೇಲೆ ವಾಗ್ದಾಳಿ ತೀಕ್ಷ್ಣಗೊಳಿಸುತ್ತಿರುವಾಗ ಶಿಸ್ತು ಮತ್ತು ಏಕತೆ ಇಲ್ಲಿ ನಿರ್ಣಾಯಕವಾಗಿರುತ್ತದೆ ಎಂದು ಅವರು ಶಾಸಕರಿಗೆ ಬುದ್ದಿಮಾತು ಹೇಳಿದರು ಎಂದು ವರದಿಯಾಗಿದೆ.
ಕಾಂಗ್ರೆಸ್‌ನೊಳಗೆ ಯಾವುದೇ ಆಂತರಿಕ ಕಲಹ ಇಲ್ಲ ಎಂದು ಊಹಾಪೋಹಗಳನ್ನು ತಳ್ಳಿಹಾಕಿದ ಮಾಜಿ ಸಚಿವ ಕೆ.ಎನ್. ರಾಜಣ್ಣ, ಸಿಎಲ್‌ಪಿ ಸಭೆಯು ಪ್ರಾದೇಶಿಕ ಸಮಸ್ಯೆಗಳು ಮತ್ತು ಮುಂಬರುವ ಸದನದ ಕಾರ್ಯತಂತ್ರದ ಮೇಲೆ ಕೇಂದ್ರೀಕರಿಸಿತ್ತು ಹೊರತು ರಾಜಕೀಯ ಚರ್ಚೆಗಳಾಗಿಲ್ಲ ಎಂದರು.
ಉತ್ತರ ಕರ್ನಾಟಕ ಭಾಗದ ಜನರ ಸಮಸ್ಯೆಗಳು ಮತ್ತು ನಮ್ಮ ಸದಸ್ಯರು ಅವುಗಳನ್ನು ಶಾಸಕಾಂಗದಲ್ಲಿ ಹೇಗೆ ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಬೇಕು ಎಂಬುದರ ಕುರಿತು ನಾವು ಚರ್ಚಿಸಿದ್ದೇವೆ. ಸದನದೊಳಗೆ ವಿರೋಧ ಪಕ್ಷದವರನ್ನು ಹೇಗೆ ಎದುರಿಸುವುದು ಮತ್ತು ಪ್ರತಿಕ್ರಿಯಿಸುವುದು ಎಂಬುದರ ಕುರಿತು ಮುಖ್ಯಮಂತ್ರಿಗಳು ಸಚಿವರು ಮತ್ತು ಶಾಸಕರಿಗೆ ನಿರ್ದಿಷ್ಟ ಸೂಚನೆಗಳನ್ನು ನೀಡಿದರು ಎಂದು ರಾಜಣ್ಣ ಹೇಳಿದರು.
ಶಾಸಕರು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಸಭೆಯಲ್ಲಿ ಅವಕಾಶ ನೀಡಲಾಯಿತು, ಆದರೆ ಯಾವುದೇ ವಿವಾದಾತ್ಮಕ ರಾಜಕೀಯ ಚರ್ಚೆ ನಡೆದಿಲ್ಲ ಎಂದು ಅವರು ಹೇಳಿದರು.
ಸಭೆಯ ಹೊರಗೆ ಕೆಲವು ಶಾಸಕರು ನೀಡಿದ ಹೇಳಿಕೆಗಳ ಕುರಿತು ಮಾತನಾಡಿದ ರಾಜಣ್ಣ, ಯಾವೊಬ್ಬ ಶಾಸಕರೂ ಹೊರಗೆ ಏನಾದರೂ ಹೇಳಿದರೆ ಅದು ಸಂಪೂರ್ಣವಾಗಿ ಅವರ ವೈಯಕ್ತಿಕ ಅಭಿಪ್ರಾಯ. ಅದು ಪಕ್ಷದ ನಿಲುವು ಅಥವಾ ಹೈಕಮಾಂಡ್‌ನ ಅಭಿಪ್ರಾಯವಲ್ಲ ಎಂದು ಹೇಳಿದರು.
ಬಿಜೆಪಿಗೆ ಹೋಗುತ್ತಾರೆ ಎಂಬ ಊಹಾಪೋಹದ ಬಗ್ಗೆ ಮಾತನಾಡಿದ ರಾಜಣ್ಣ, 1969 ರಿಂದ ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಎಂದಿಗೂ ಪಕ್ಷದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಸಭೆಯಲ್ಲಿ ಹಲವು ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸಲು ಮುಖ್ಯಮಂತ್ರಿ ಮೂಲಸೌಕರ್ಯ ಅಭಿವೃದ್ಧಿ ಉಪಕ್ರಮದ ಅಡಿಯಲ್ಲಿ 50 ಕೋಟಿ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಯನ್ನು ಕೇಳಿಕೊಂಡರು. ಶಾಸಕರು ತಮಗೆ ಅನುದಾನವನ್ನು ಭಾಗಶಃ ನೀಡಲಾಗಿದೆ ಎಂದು ಹೇಳಿದರು. ಸಂಪೂರ್ಣ ಕಂತಿನ ಬಿಡುಗಡೆಗಾಗಿ ಸರ್ಕಾರಕ್ಕೆ ಮನವಿ ಮಾಡಿದರು.
Advertisement