

ಬೆಳಗಾವಿ: ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ ಮಧ್ಯೆ ಸಿಎಂ ಹುದ್ದೆ ಬದಲಾವಣೆ ವಿಷಯ ಚರ್ಚೆಯಾಗುತ್ತಲೇ ಇದೆ, ಇಂದು ಸಿಎಂ ಸಿದ್ದರಾಮಯ್ಯ ಪುತ್ರ ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಹೇಳಿಕೆ ಪುನರುಚ್ಛರಿಸಿದ್ದಾರೆ.
'ಲೀಡರ್ ಶಿಪ್ ಬದಲಾವಣೆ ಇಲ್ಲ'
ಇಂದು ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಮುಖ್ಯಮಂತ್ರಿ ಹುದ್ದೆಯಲ್ಲಿ ಯಾವುದೇ ಗೊಂದಲವಾಗಲಿ, ಭಿನ್ನಾಭಿಪ್ರಾಯವಾಗಲಿ ಇಲ್ಲ. ಎಲ್ಲವೂ ಸ್ಪಷ್ಟವಾಗಿದೆ. ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ, ನನ್ನ ತಂದೆಯೇ 5 ವರ್ಷ ಸಿಎಂ ಆಗಿ ಇರುತ್ತಾರೆ ಎಂದರು.
ಯತೀಂದ್ರ ಅವರ ಹೇಳಿಕೆಗೆ ಸುದ್ದಿಗಾರರು ಇಂದು ಬೆಳಗಾವಿಯಲ್ಲಿ ಪ್ರತಿಕ್ರಿಯೆ ಕೇಳಿದಾಗ ಡಿಸಿಎಂ ಡಿ ಕೆ ಶಿವಕುಮಾರ್ ಇದಕ್ಕೆ ಸಿಎಂ ಅವರೇ ಉತ್ತರ ನೀಡುತ್ತಾರೆ ಎಂದರು.
ಕುರ್ಚಿ ಕಿತ್ತಾಟದ ಬಗ್ಗೆ ಯಾರೂ ಬಹಿರಂಗ ಹೇಳಿಕೆ ನೀಡದಂತೆ ಸಿಎಂ ಸೂಚಿಸಿದ್ದರೂ ಪುತ್ರ ಮತ್ತೆ ಈ ಹೇಳಿಕೆಯನ್ನು ಮಾಧ್ಯಮಗಳ ಮುಂದೆ ನೀಡಿದ್ದು ರಾಜ್ಯ ರಾಜಕಾರಣ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
ಪವರ್ ಶೇರಿಂಗ್ ಪಾಲಿಟಿಕ್ಸ್
ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ಪಾಲಿಟಿಕ್ಸ್ ಮತ್ತೆ ಗರಿಗೆದರಿದೆ. ಒಳಗೊಳಗೆ ಮೀಟಿಂಗ್ಗಳು ನಡೀತಿದ್ದು, ನಾಯಕತ್ವದ ಬದಲಾವಣೆ ವಿಚಾರ ಭಾರೀ ಚರ್ಚೆ ಆಗುತ್ತಿದೆ. ರಾಜಧಾನಿಯಿಂದ ಬೆಳಗಾವಿಗೆ ಡಿನ್ನರ್ ಪಾಲಿಟಿಕ್ಸ್ ಶಿಫ್ಟ್ ಆಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಕೂಡ ಬೆಳಗಾವಿಗೆ ಬಂದಿದ್ದು, ಭಾರೀ ರಣತಂತ್ರವನ್ನೇ ಹೆಣೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಮತ್ತೊಂದೆಡೆ ಸಿಎಂ ನೇತೃತ್ವದಲ್ಲಿ ಅಹಿಂದ ನಾಯಕರ ಡಿನ್ನರ್ ಮೀಟಿಂಗ್ ಚರ್ಚೆ ಸದ್ದು ಮಾಡುತ್ತಿದೆ.
Advertisement