

ವಿಜಯಪುರ: ಸಚಿವ ಎಂ.ಬಿ. ಪಾಟೀಲ ಅವರು, ಕಾಂಗ್ರೆಸ್ ಯಾರೋ ಒಬ್ಬ ನಾಯಕನಿಂದ ಬೆಳೆದಿಲ್ಲ ಎಂಬ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ಬೆಂಬಲಿಸುವ ಮೂಲಕ ಶನಿವಾರ ಪರೋಕ್ಷವಾಗಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಯಾರೋ ಒಬ್ಬ ನಾಯಕನಿಂದ ಬೆಳೆದಿಲ್ಲ. ಹೀಗಾಗಿ ಯಾರೊಬ್ಬರೂ ನನ್ನಿಂದ ಅಧಿಕಾರಕ್ಕೆ ಬಂತು, ನಾನೇ ಪಕ್ಷ ಕಟ್ಟಿದ್ದೇನೆಂದು ಹೇಳಬಾರದು. ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಕಟ್ಟಿದ ಪಕ್ಷ. ಪಕ್ಷ ಅಂದ ಮೇಲೆ ಎಲ್ಲರ ಪಾತ್ರವೂ ಇರುತ್ತೆ ಎಂದು ಮಲ್ಲಿಕಾರ್ಜನ ಖರ್ಗೆ ಅವರು ಕಲಬುರಗಿಯಲ್ಲಿ ಹೇಳಿದ್ದರು.
ಇಂದು ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ಖರ್ಗೆ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಎಂ.ಬಿ.ಪಾಟೀಲ ಅವರು, ಖರ್ಗೆ ಅವರು ಹೇಳಿದ್ದು ಸತ್ಯ. ಕಾಂಗ್ರೆಸ್ ತತ್ವ, ಸಿದ್ಧಾಂತದ ಮೇಲೆ ನಿಂತಿದೆ. ಕೆಲವೇ ಜನರಿಂದ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದರು.
ಕಾಂಗ್ರೆಸ್ ರಾಜಕೀಯ ಪಕ್ಷವಾಗಿ ಹುಟ್ಟಿಕೊಂಡಿರೋದಲ್ಲ. ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ಹುಟ್ಟಿಕೊಂಡ ಸಂಘಟನೆ. ಹೀಗಾಗಿ ಯಾರೋ ಸಹ ನನ್ನಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಅಂತ ಹೇಳಬಾರದು ಎಂದರು.
ನಾಯಕತ್ವ ಬದಲಾವಣೆ ವಿಷಯದಲ್ಲಿ ಹೈಕಮಾಂಡ್ ನಿರ್ಧಾರವೇ ಅಂತಿಮ. ಹೈಕಮಾಂಡ್ ಏನು ಹೇಳುತ್ತದೆಯೋ ಅದಕ್ಕೆ ಸಿಎಂ, ಡಿಸಿಎಂ ಹಾಗೂ ನಾನೂ ಸೇರಿದಂತೆ ಎಲ್ಲ ಕಾಂಗ್ರೆಸ್ಸಿಗರು ಬದ್ಧರಾಗಿರುತ್ತೇವೆ ಎಂದು ಹೇಳಿದರು.
Advertisement