

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಮತ್ತೊಂದು ಪತ್ರ ಬರೆದಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಕಾಂಗ್ರೆಸ್ ನ ಮತಕಳ್ಳತನ ಅಭಿಯಾನದ ಬಗ್ಗೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದ್ದು, ಭೇಟಿಗೂ ಸಮಯ ಕೇಳಿದ್ದಾರೆ.
ಈಗಾಗಲೇ ನಾಲ್ಕು ಪತ್ರಗಳನ್ನು ಬರೆದಿರುವ ರಾಜಣ್ಣ, ರಾಜ್ಯದಲ್ಲಿನ ವಿದ್ಯಮಾನದಿಂದ ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪತ್ರದಲ್ಲಿ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೈ ಬಿಟ್ಟರೆ ಆಗುವ ಸಮಸ್ಯೆ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಬಗ್ಗೆಯೂ ಮನವರಿಕೆ ಯತ್ನ ಮಾಡಿದ್ದರು.
ರಾಜಣ್ಣ ಬರೆದ ಪತ್ರದಲ್ಲೇನಿದೆ?
ತಾನು ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಪ್ರಸ್ತುತ ಶಾಸಕನಾಗಿದ್ದು, ಸರ್ಕಾರದಲ್ಲಿ ಸಹಕಾರ ಸಚಿವನಾಗಿಯೂ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದೇನೆ. ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರ ಸಚಿವ ಸಂಪುಟದಿಂದ ತನ್ನನ್ನು ಕೈಬಿಟ್ಟಿರುವ ಹಿನ್ನೆಲೆಯಲ್ಲಿ, ಕೆಲ ಪ್ರಮುಖ ವಿಷಯಗಳನ್ನು ಗಮನಕ್ಕೆ ತರುತ್ತಿದ್ದೇನೆ ಎಂದು ಪತ್ರದಲ್ಲಿ ರಾಜಣ್ಣ ಬರೆದಿದ್ದಾರೆ.
ವೋಟ್ ಚೋರಿ ಕಾರ್ಯಕ್ರಮವನ್ನು ತಾನು ಹೃದಯಪೂರ್ವಕವಾಗಿ ಬೆಂಬಲಿಸಿದ್ದು,ಇಂತಹ ಮಹತ್ವದ ವಿಷಯಗಳನ್ನು ದೇಶದ ಮುಂದೆ ಇಡುವ ನಿಮ್ಮ ನಾಯಕತ್ವ ಮತ್ತು ಮುಂದಾಳತ್ವವನ್ನು ಆಳವಾಗಿ ಮೆಚ್ಚುತ್ತೇನೆ. ನಾನು ನೀಡಿದ್ದ ಹೇಳಿಕೆಯ ಉದ್ದೇಶ ಏನೆಂದರೆ, ಕೆಪಿಸಿಸಿ ನೇಮಕ ಮಾಡಿದ ಬಿಎಲ್ಏಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಸಂಬಂಧಿಸಿದವರು ಈ ಲೋಪಗಳತ್ತ ಸೂಕ್ತ ಗಮನ ನೀಡಿದ್ದರೆ, ಅವುಗಳನ್ನು ತಪ್ಪಿಸಬಹುದಾಗಿತ್ತು. ಹಾಗಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇನ್ನೂ 8 ರಿಂದ 10 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲುವ ಸಾಧ್ಯತೆ ಇತ್ತು. ಇದೇ ರೀತಿಯ ಲೋಪಗಳನ್ನು ಇತರ ರಾಜ್ಯಗಳಲ್ಲಿಯೂ ತಪ್ಪಿಸಿದ್ದರೆ, ಇನ್ನೂ 30 ರಿಂದ 40 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲಬಹುದಾಗಿತ್ತು. ಆ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗುತ್ತಿರಲಿಲ್ಲ.
ತಮ್ಮ ರಾಜಕೀಯ ಜೀವನ, ಕಾಂಗ್ರೆಸ್ ಪಕ್ಷದ ಮೇಲಿನ ನಿಷ್ಠೆ, ಸಚಿವನಾಗಿ ಮಾಡಿದ ಕೆಲಸಗಳು ಸೇರಿ ತಮ್ಮ ರಾಜಕೀಯ ಸಾಧನೆ ಬಗ್ಗೆಯೂ ಪತ್ರದಲ್ಲಿ ರಾಜಣ್ಣ ಉಲ್ಲೇಖಿಸಿದ್ದು, ಸತ್ಯಾಸತ್ಯತೆಯನ್ನು ನಿಮ್ಮಮುಂದಿಡುವ ಸಲುವಾಗಿ ಈ ಪತ್ರ ಬರೆದಿದ್ದೇನೆ. ಜೊತೆಗೆ, ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿ, ತಪ್ಪು ರೀತಿಯಲ್ಲಿ ನಿಮ್ಮ ಗಮನಕ್ಕೆ ತಂದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿನಂತಿಸುತ್ತೇನೆ ಎಂದು ಒತ್ತಾಯಿಸಿದ್ದಾರೆ.
Advertisement