

ಬೆಂಗಳೂರು: ಕಾಂಗ್ರೆಸ್ಸಿಗರು ಆಡಳಿತ ನಡೆಸುತ್ತಿದ್ದಾಗ ಗಾಂಧೀಜಿ ಅವರಿಗೆ ಎಷ್ಟು ಗೌರವ ನೀಡಿದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿದರು ಎನ್ನುವ ಕಾರಣಕ್ಕೆ ಕಾಂಗ್ರೆಸ್ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಗಾಂಧಿ ಅವರ ಬಗ್ಗೆ ಇಷ್ಟೊಂದು ಕಾಳಜಿ-ಕಳಕಳಿ ಇರುವವರು ಇಂದಿರಾ ಗಾಂಧಿ, ರಾಜೀವ್ ಗಾಂಧಿ ಆಳ್ವಿಕೆ ಮಾಡಿದ ಸಂದರ್ಭದಲ್ಲಿ ಎಲ್ಲಿಯಾದರೂ ಗಾಂಧೀಜಿ ಅವರ ಒಂದು ಪೋಸ್ಟರ್ ನೋಡಿದೀರಾ, ಎಲ್ಲಿಯಾದರೂ ಮಹಾತ್ಮಾ ಗಾಂಧಿ ಅವರ ಫೋಟೋ ಇಟ್ಟುಕೊಂಡು ಚುನಾವಣೆ ನಡೆಸಿದ್ದಾರಾ ಎಂದು ತಿರುಗೇಟು ನೀಡಿದ್ದಾರೆ.
ಈಗ ನೋಡಿದರೆ ಕಾಂಗ್ರೆಸ್ಸಿಗರು ಇಷ್ಟು ಜೋರಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಕರ್ನಾಟಕದ ಗ್ಯಾರಂಟಿ ಬಿಹಾರದವರೆಗೂ ಹೋಯಿತು. ಅಲ್ಲಿ ವರ್ಕ್ ಆಗಲಿಲ್ಲ. ಮೋದಿ ಅವರಿಗೆ ದೇಶ ನಡೆಸಲು ಗೊತ್ತು. ಎಲ್ಲೆಲ್ಲಿ ಹಣ ಪೋಲಾಗುತ್ತಿದೆ ಎಂಬುದು ಅವರಿಗೆ ಗೊತ್ತು.
ಯಾವ ರಾಜ್ಯ ಹೇಗೆಲ್ಲಾ ಹಣ ಖರ್ಚು ಮಾಡುತ್ತಿದೆ ಎಂಬುದೂ ಅವರಿಗೆ ಗೊತ್ತು. ನಾನೇನು ಮೋದಿ ಅವರನ್ನು ಹೊಗಳಲು ಬಂದಿಲ್ಲ ಎಂದರು. ನರೇಗಾಗೆ 60:40 ಅನುಪಾತದಲ್ಲಿ ಅನುದಾನ ಹಂಚಿಕೆ ಮಾಡಿದ್ದಾರೆ.
ಕೆಲಸದ ದಿನಗಳನ್ನು ಹೆಚ್ಚು ಮಾಡಿದ್ದಾರೆ. ರಾಮನ ಹೆಸರು ಇಟ್ಟುಕೊಂಡಿದ್ದಾರೆ ಅಂತಾರೆ. ನಮ್ಮ ಮನೆಗೆ ಬನ್ನಿ, ರಾಮ, ಕೃಷ್ಣ, ವೆಂಕಟೇಶ್ವರ ಎಲ್ಲರ ಫೋಟೋಗಳು ಇವೆ. ರಾಮ ಪುರುಷೋತ್ತಮ ಅಂತ ವಾಲ್ಮೀಕಿ ಹೇಳಿದ್ದಾರೆ. ಇದರ ಬಗ್ಗೆ ಇಷ್ಟು ಜಿಜ್ಞಾಸೆ ಯಾಕೆ? ಎಂದು ದೇವೇಗೌಡ ಪ್ರಶ್ನಿಸಿದ್ದಾರೆ.
ಅಧಿಕಾರ ಹಸ್ತಾಂತರದ ವಿಚಾರದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮಾಡುತ್ತಿರುವ ಹೈಡ್ರಾಮಾ ದೊಂಬರಾಟದಂತಿದೆ. ಈ ಹಿಂದೆ ಗ್ರಾಮೀಣ ಭಾಗದಲ್ಲಿ ದೊಂಬರಾಟ ಆಡುತ್ತಿದ್ದರು. ಅದು ನೆನಪಿಸುವಂತಿದೆ ಎಂದು ಆರೋಪಿಸಿದರು. ಉಪಮುಖ್ಯಮಂತ್ರಿ ಡಿಕೆಶಿಯವರು ಮಾಡುತ್ತಿರುವಷ್ಟು ದೇವರ ಪೂಜೆಯನ್ನು ನಾನೂ ಮಾಡಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
Advertisement