

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ 2026 ರಲ್ಲಿ ಮಾತನಾಡುವುದಾಗಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಂಗಳವಾರ ಹೇಳಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇನ್ನೂ 7.5 ವರ್ಷ ಅಧಿಕಾರದಲ್ಲಿರುತ್ತದೆ ಎಂದು ಪ್ರತಿಪಾದಿಸಿದ ಡಿಸಿಎಂ, ತಮ್ಮ ಹೊಸ ವರ್ಷದ ಸಂಕಲ್ಪದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, "ನಿಮ್ಮೆಲ್ಲರನ್ನೂ ಸಂತೋಷವಾಗಿಡುವುದೇ ನಮ್ಮ ಸಂಕಲ್ಪ. ರಾಜ್ಯದ ಜನರನ್ನು ಸಂತೋಷವಾಗಿಡುವುದು. ಹೊಸ ಚಿಂತನೆಯೊಂದಿಗೆ ರಾಜ್ಯಕ್ಕೆ ಸಮೃದ್ಧ ಆಡಳಿತ ನೀಡುವುದು. ಈ ವರ್ಷ ಉತ್ತಮ ಮಳೆ ಮತ್ತು ಫಸಲು ಬರಲಿ ಎಂದು ಬಯಸುತ್ತೇವೆ" ಎಂದರು.
"ಎಲ್ಲಾ ನದಿಗಳು ಮತ್ತು ಕೆರೆಗಳಿಗೆ ಹೇರಳವಾದ ನೀರು ಸಿಗಲಿ. ರೈತರು ಹೊಸ ವರ್ಷದಲ್ಲಿ ಸಂತೋಷವಾಗಿರಲಿ ಎಂದು ನಾವು ಬಯಸುತ್ತೇವೆ" ಎಂದು ಡಿಕೆಶಿ ಹೇಳಿದರು.
2026 ರಲ್ಲಿ ರಾಜ್ಯದ ಆಡಳಿತ ನಿಮ್ಮ ನೇತೃತ್ವದಲ್ಲಿ ನಡೆಯುತ್ತದೆಯೇ ಎಂದು ಕೇಳಿದಾಗ, "ಕಾಂಗ್ರೆಸ್ ಆಡಳಿತ ಮುಂದುವರಿಯುತ್ತದೆ. ಮುಂದಿನ ಏಳೂವರೆ ವರ್ಷಗಳ ಕಾಲ(ಪ್ರಸ್ತುತ ಸರ್ಕಾರದ 2.5 ವರ್ಷ ಮತ್ತು 2028ರ ವಿಧಾನಸಭಾ ಚುನಾವಣೆಯ ನಂತರ ಹೊಸ ಸರ್ಕಾರ) ಅಧಿಕಾರದಲ್ಲಿರುತ್ತದೆ" ಎಂದರು.
ಹೊಸ ವರ್ಷದಲ್ಲಿ ಡಿ ಕೆ ಶಿವಕುಮಾರ್ ಅವರ ನಾಯಕತ್ವ ನಿರೀಕ್ಷಿಸಬಹುದೇ? ಎಂಬ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, "ನಾನು ಈ ಬಗ್ಗೆ 2026 ರಲ್ಲಿ ಮಾತನಾಡುತ್ತೇನೆ" ಎಂದು ಉತ್ತರಿಸಿದರು.
ಜನವರಿ 6 ಅಥವಾ 9 ರಂದು ಡಿಕೆ ಶಿವಕುಮಾರ್ ಸಿಎಂ ಆಗುವುದು "ಶೇಕಡಾ 200 ರಷ್ಟು ಸತ್ಯ" ಎಂಬ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಇಕ್ಬಾಲ್ ಹುಸೇನ್ ಅವರನ್ನು ಗಂಭೀರವಾಗಿ ಪರಿಗಣಿಸಬೇಡಿ" ಎಂದರು.
ಇನ್ನು ಕೇರಳ ಬಿಜೆಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಜನರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, ತಮ್ಮ ಈ ಹಿಂದಿನ ಹೇಳಿಕೆಯನ್ನು ರಾಜೀವ್ ಚಂದ್ರಶೇಖರ್ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು.
"ಕೇರಳ ಸರ್ಕಾರ ಕರ್ನಾಟಕದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾವು ಬಯಸುವುದಿಲ್ಲ. ನಾವು ಉತ್ತಮವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ. ಅವರು ಏನು ಬೇಕಾದರೂ ಹೇಳಿಕೆ ನೀಡಲಿ. ನಾವು ಅಕ್ರಮ ಒತ್ತುವರಿಗೆ ಅವಕಾಶ ನೀಡುವುದಿಲ್ಲ. ಅವರು ಈ ಹಿಂದೆ ಕೊಟ್ಟ ಭರವಸೆ, ಪ್ರವಾಹದ ಸಂದರ್ಭದಲ್ಲಿ ನೀಡಿದ ಮಾತನ್ನೇ ಈಡೇರಿಸಿಲ್ಲ. ಅಂತಹವರು ನಮಗೆ ಹೇಳುವ ಅವಶ್ಯಕತೆ ಇಲ್ಲ. ನಮ್ಮ ರಾಜ್ಯದ ವಿಚಾರವನ್ನು ಹೇಗೆ ನಿಭಾಯಿಸಬೇಕು ಎಂಬುದು ನಮಗೆ ತಿಳಿದಿದೆ ಎಂದರು.
Advertisement