
ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಹಾಗೂ ಅಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಅವರು ಶನಿವಾರ ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಬಿಆರ್ ಪಾಟೀಲ್ ಅವರ ದಿಢೀರ್ ರಾಜೀನಾಮೆ ಕಾಂಗ್ರೆಸ್ನಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ನಾನು ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಈಗಾಗಲೇ ತಲುಪಿಸಿದ್ದೇನೆ ಎಂದು ಬಿಆರ್ ಪಾಟೀಲ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆದರೆ ರಾಜೀನಾಮೆಗೆ ಕಾರಣ ಏನು ಎಂಬ ಪ್ರಶ್ನೆಗೆ, ನಾನಾಗಿಯೇ ತನ್ನ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಆದರೆ ಬಿಆರ್ ಪಾಟೀಲ್ ಅವರ ದಿಢೀರ್ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ. ಏಕಾಏಕಿ ರಾಜೀನಾಮೆ ಏಕೆ ನೀಡಿದ್ದಾರೆ ಎನ್ನುವುದು ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ತಮಗೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ಕೆಲ ಹಿರಿಯ ಶಾಸಕರು ಅಸಮಾಧಾನಗೊಂಡಿದ್ದರು. ಆರ್‌ವಿ ದೇಶಪಾಂಡೆ, ಬಸವರಾಜ್ ರಾಯರೆಡ್ಡಿ ಹಾಗೂ ಬಿಆರ್ ಪಾಟೀಲ್ ಸಹ ಬೇಸರಗೊಂಡಿದ್ದರು. ಹೀಗಾಗಿ ಬಂಡಾಯ ಎದ್ದಿದ್ದ ಶಾಸಕರಿಗೆ ವಿಶೇಷ ಹುದ್ದೆಗಳ ಸ್ಥಾನ ಮಾನ ನೀಡಲಾಗಿತ್ತು. ಬಸವರಾಜ ರಾಯರೆಡ್ಡಿ ಅವರಿಗೆ ಸಿಎಂ ಆರ್ಥಿಕ ಸಲಹೆಗಾರ ಹುದ್ದೆ, ಬಿಆರ್ ಪಾಟೀಲ್ ಅವರನ್ನು ಸಿಎಂ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಹಾಗೇ ಆರ್‌ವಿ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು, ಆದರೆ, ಇದೀಗ ಬಿಆರ್ ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Advertisement