
ಚನ್ನಪಟ್ಟಣ: ಹಳೇ ಮೈಸೂರು ಭಾಗದಲ್ಲಿ 'ಆಪರೇಷನ್ ಹಸ್ತ' ದ ಮಾತುಗಳು ಕೆಲ ದಿನಗಳಿಂದ ಕೇಳಿಬರುತ್ತಿದೆ. ಇದಕ್ಕೆ ಇಂಬು ನೀಡುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ಬಹಿರಂಗವಾಗಿಯೇ ಜೆಡಿಎಸ್ ಶಾಸಕರಿಗೆ ಆಫರ್ ನೀಡಿದ್ದಾರೆ.
ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಪಾಪ ಜೆಡಿಎಸ್ ಕಾರ್ಯಕರ್ತರಿಗೆ ಹೇಳಬೇಕು. ಅವರು ಟೈಮ್ ವೆಸ್ಟ್ ಮಾಡಿಕೊಳ್ಳುವುದು ಬೇಡ. ಬೆಂಗಳೂರು ದಕ್ಷಿಣ ಜಿಲ್ಲೆಯಾಗುತ್ತಿದೆ. ಒಬ್ಬ ವ್ಯಕ್ತಿಗೋಸ್ಕರ ಇಡೀ ಪಕ್ಷವನ್ನು ಬಲಿಕೊಟ್ಟಿದ್ದಾರೆ. ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ. ನಾನು ಸಿದ್ದರಾಮಯ್ಯ ನಿಮ್ಮ ಜೊತೆಗೆ ನಿಲ್ಲುತ್ತೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಗೆ ಬರುವಂತೆ ಆಹ್ವಾನ ನೀಡಿದರು.
ಮತದಾರರು ಈ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಶಕ್ತಿ ನೀಡಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ನಾಯಕರು ಸೇರಿ ಚನ್ನಪಟ್ಟಣ ಹಾಗೂ ಇಡೀ ಜಿಲ್ಲೆಯ ಚಿತ್ರಣ ಬದಲಿಸುತ್ತೇವೆ ಎಂದರು.
ಇದೇ ವೇಳೆ ಸಂಸದ ಕುಮಾರಸ್ವಾಮಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಡಿಕೆ ಶಿವಕುಮಾರ್, 2 ಬಾರಿ ಸಿಎಂ ಆದರೂ ದೇವಾಲಯ, ಶಾಲೆ ಕಟ್ಟಿಸಲಿಲ್ಲ. ಅಭಿವೃದ್ಧಿ ಮಾಡಿದ್ದೇವೆ ಎಂಬುದಕ್ಕೆ ಸಾಕ್ಷಿ ಗುಡ್ಡೆ ಏನು ಎಂದು ಪ್ರಶ್ನಿಸಿದರು. ಡಿಕೆ ಸುರೇಶ್ ಹಾಗೂ ನನ್ನ ಬಗ್ಗೆ ತುಂಬಾ ಕೀಳಾಗಿ ಮಾತನಾಡಿದ್ದಾರೆ. ಆದರೆ, ನಾವು ಏನನ್ನೂ ಮಾತನಾಡಿಲ್ಲ. ಎಲ್ಲರಿಗೂ ಈ ಚನ್ನಪಟ್ಟಣವೇ ಉತ್ತರ ನೀಡಲಿದೆ ಎಂದರು.
ನಾನು ಯಾರನ್ನೂ ಟೀಕಿಸುವ ಅಗತ್ಯವಿಲ್ಲ. ನಮ್ಮನ್ನು ಅಪೂರ್ವ ಸಹೋದರರು ಎಂದವರು, ನಮ್ಮ ಬಗ್ಗೆ ತುಚ್ಛವಾಗಿ ಮಾತನಾಡಿದ ದೇವೇಗೌಡರು, ಕುಮಾರಸ್ವಾಮಿ, ಯಡಿಯೂರಪ್ಪ ಸೇರಿದಂತೆ ಬಿಜೆಪಿ ಹಾಗೂ ದಳದ ಎಲ್ಲ ನಾಯಕರಿಗೆ ನಿಮ್ಮ ತಟ್ಟೆ ಮರೆ ಏಟು ಉತ್ತರವಾಗಿದೆ. ನೀವು ಕೇವಲ ಚನ್ನಪಟ್ಟಣಕ್ಕೆ ಮಾತ್ರ ಉತ್ತರ ನೀಡಿಲ್ಲ, ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದೀರಿ. ನಮ್ಮ ಅಧಿಕಾರ ನಶ್ವರ, ನಾವು ಮಾಡುವ ಸಾಧನೆ ಅಜರಾಮರ, ಮತದಾರರೇ ಈಶ್ವರ" ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಮಾಗಡಿ ಶಾಸಕ ಹೆಚ್.ಸಿ. ಬಾಲಕೃಷ್ಣ, ಪರೋಕ್ಷವಾಗಿ ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಹೇಳಿದರು.
Advertisement