ಮುನಿರತ್ನಗೆ ಮೊಟ್ಟೆ ಏಟು ಬಿದ್ದು ತಲೆ ಕೆಟ್ಟು ಹೋಗಿದೆ; ಕೆಟ್ಟ ಕೆಲಸ ಮಾಡೋದರಲ್ಲಿ ಬಿಜೆಪಿಯವರು ಎತ್ತಿದ ಕೈ: DK ಸುರೇಶ್

ಇತರೇ ರಾಜ್ಯಗಳಲ್ಲಿ ನಮ್ಮ ತೆರಿಗೆ ಹಣವನ್ನು ಕೇಂದ್ರ ಬಿಜೆಪಿ ಸರ್ಕಾರ ವೃಥಾ ವ್ಯಯ ಮಾಡುತ್ತಿದೆ. ದಕ್ಷಿಣ ಭಾರತದಲ್ಲಿ ಎಲ್ಲವೂ ಬಿಜೆಪಿಯೇತರ ಸರ್ಕಾರಗಳೇ ಇವೆ. ದಕ್ಷಿಣ ಭಾರತಕ್ಕೆ ಸದಾ ಅನ್ಯಾಯ ಮಾಡಲಾಗುತ್ತಿದೆ.
D K Suresh
ಡಿ.ಕೆ ಸುರೇಶ್
Updated on

ಬೆಂಗಳೂರು: ಬಿಜೆಪಿಯವರು ಮೆಟ್ರೋ ದರ ಏರಿಕೆ ವಿರುದ್ಧ ಪ್ರತಿಭಟನೆ ನಾಟಕ ಮಾಡುವ ಬದಲು ಕರ್ನಾಟಕದ ಪಾಲಿನ ತೆರಿಗೆ ಹಣ ಕೊಡಿಸಲಿ. ಒಳ್ಳೆಯ ಕೆಲಸ ಮಾಡದೇ ಇದ್ದರೂ ಕೆಟ್ಟ ಕೆಲಸ ಮಾಡುವುದರಲ್ಲಿ ಬಿಜೆಪಿಯವರು ಎತ್ತಿದ ಕೈ. ಕರ್ನಾಟಕದ ಅಭಿವೃದ್ದಿಗೆ ಕೇಂದ್ರ ಸರ್ಕಾರವೇ ಅಡ್ಡಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಅವರು ಕಿಡಿಕಾರಿದರು.

ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯಗಳು ಹೆಚ್ಚಿನ ತೆರಿಗೆ ಪಾಲು ಕೇಳುವುದು ಸಣ್ಣತನ ಎನ್ನುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ರಾಜ್ಯಗಳ ಸಣ್ಣತನ ಎನ್ನುವುದಕ್ಕಿಂತ ರಾಜ್ಯಗಳ ಆರ್ಥಿಕ ಸ್ಥಿತಿಯನ್ನು ಕೇಂದ್ರ ಸರ್ಕಾರ ಹಾಳು ಮಾಡುತ್ತಿದೆ. ಇತರೇ ರಾಜ್ಯಗಳಲ್ಲಿ ನಮ್ಮ ತೆರಿಗೆ ಹಣವನ್ನು ಕೇಂದ್ರ ಬಿಜೆಪಿ ಸರ್ಕಾರ ವೃಥಾ ವ್ಯಯ ಮಾಡುತ್ತಿದೆ. ದಕ್ಷಿಣ ಭಾರತದಲ್ಲಿ ಎಲ್ಲವೂ ಬಿಜೆಪಿಯೇತರ ಸರ್ಕಾರಗಳೇ ಇವೆ. ದಕ್ಷಿಣ ಭಾರತಕ್ಕೆ ಸದಾ ಅನ್ಯಾಯ ಮಾಡಲಾಗುತ್ತಿದೆ. ಜನ ಎಚ್ಚೆತ್ತುಕೊಳ್ಳಬೇಕಾಗಿದೆ. ಅಭಿವೃದ್ದಿಗೆ ಹಣ ನೀಡದೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿರುವ ಬೆಂಗಳೂರಿಗೆ ಕೆಟ್ಟ ಹೆಸರು ತರಬೇಕು ಎನ್ನುವುದು ಬಿಜೆಪಿಯ ಹುನ್ನಾರ” ಎಂದರು.

ರಾಜ್ಯ ಸರ್ಕಾರ ಪ್ರಧಾನಿಯವರಿಗೆ ಪತ್ರ ಬರೆದರೆ ಮೆಟ್ರೋ ದರ ಕಡಿಮೆಯಾಗುತ್ತದೆ ಎನ್ನುವ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ರಾಜ್ಯ ಸರ್ಕಾರ ಪತ್ರ ಏಕೆ ಬರೆಯಬೇಕು?. ನಮ್ಮ ಪಾಲಿನ ತೆರಿಗೆ ಹಣ ಕೇಳಿದ್ದೇವೆ ಅದನ್ನು ಕೊಡಿಸಲಿ. ಅವರ ನೈಪುಣ್ಯತೆ, ಬದ್ಧತೆಯನ್ನು ಈ ವಿಚಾರದಲ್ಲಿ ತೋರಿಸಲಿ” ಎಂದು ತಿರುಗೇಟು ನೀಡಿದರು.

ಶಾಸಕ ಮುನಿರತ್ನ ಅವರು ಬೆಂಗಳೂರು ಅಭಿವೃದ್ಧಿಯಾಗುತ್ತಿಲ್ಲ. ಸುಮಾರು 20 ವರ್ಷಗಳ ಹಿಂದಕ್ಕೆ ಹೋಗಿದೆ. ಶೇ.35 ರಷ್ಟು ಲಂಚ ಕೇಳುತ್ತಿದ್ದಾರೆ ಎನ್ನುವ ಆರೋಪದ ಬಗ್ಗೆ ಕೇಳಿದಾಗ, “ಲೋಕಸಭಾ ಸದಸ್ಯರಾದ ತಜ್ಞ ವೈದ್ಯರೊಬ್ಬರು ಮುನಿರತ್ನ ಅವರ ತಲೆಗೆ ಮೊಟ್ಟೆ ಏಟು ಬಿದ್ದು, ಆಸಿಡ್ ದಾಳಿಯಾಗಿ ಪೆಟ್ಟು ಬಿದ್ದಿದೆ. ತಲೆಗೆ ಏಟಾಗಿ ಒಂದೆರಡು ಇಂಚು ಒಳಗೆ ಹೋಗಿದೆ, ಹೀಗಾಗಿ ತಲೆಕೆಟ್ಟು ಹೋಗಿದೆ ಎಂದು ಹೇಳಿದ್ದರು. ಮತ್ತೊಮ್ಮೆ ಪರಿಶೀಲಿಸಿಕೊಳ್ಳಬೇಕು” ಎಂದು ವ್ಯಂಗ್ಯವಾಡಿದರು.

ಬೆಂಗಳೂರು ಹೈದರಾಬಾದ್ ಗಿಂತ ಹಿಂದಕ್ಕೆ ಉಳಿದಿದೆ, ಈ ಆರೋಪಗಳನ್ನು ಮಾಡಿರುವ ನನ್ನ ಮೇಲೆ ಮತ್ತೆ ಪ್ರಕರಣ ದಾಖಲಿಸಬಹುದು ಎನ್ನುವ ಮುನಿರತ್ನ ಹೇಳಿಕೆ ಬಗ್ಗೆ ಕೇಳಿದಾಗ, “ಅವರು ಮೊದಲೇ ಮಾಡಿಟ್ಟುಕೊಂಡಿರುವ ಕುತಂತ್ರಗಳನ್ನು ಈ ರೀತಿ ಸಾರ್ವಜನಿಕವಾಗಿ ತಿಳಿಸುತ್ತಿದ್ದಾರೆ. ಅವರು ನಡೆದು ಬಂದ ದಾರಿ ನೋಡಿದರೆ ಎಲ್ಲವೂ ತಿಳಿಯುತ್ತದೆ. ಅವರು ಯಾವ ಠಾಣೆಗಳಲ್ಲಿ ಇರುತ್ತಿದ್ದರು ಎನ್ನುವ ಇತಿಹಾಸವಿದೆ. ಈಗ ಪಲಾಯನ ಮಾಡಲು ಈ ರೀತಿಯ ಹೇಳಿಕೆಗಳನ್ನು ಮುಂಚಿತವಾಗಿಯೇ ನೀಡುತ್ತಿದ್ದಾರೆ” ಎಂದರು.

D K Suresh
ಮುಖ್ಯಮಂತ್ರಿ 660 KV ಕರೆಂಟ್, ಮುಟ್ಟಿದ್ರೆ ಸುಟ್ಟು ಹೋಗ್ತಾರೆ; ಡಿಸಿಎಂ ಅವರೇ ಸಿದ್ದರಾಮಯ್ಯಗೆ ಮಗ್ಗುಲ ಮುಳ್ಳು: ಮುನಿರತ್ನ

ಪಂಚತಾರ ಹೋಟೆಲ್ ಅಲ್ಲಿ ಕುಳಿತುಕೊಂಡು ಶಿವಕುಮಾರ್ ಅವರು ಶೇ 35 ರಷ್ಟು ಕಮಿಷನ್ ಕೇಳುತ್ತಾರೆ ಎನ್ನುವ ಬಗ್ಗೆ ಕೇಳಿದಾಗ, “ಶಿವಕುಮಾರ್ ಅವರು ಪಂಚತಾರ ಹೋಟೆಲ್ ಗಳಿಗೆ ಹೋಗುವುದಿಲ್ಲ. ಅದೇನಿದ್ದರು ಬಿಜೆಪಿಯವರ ಸಂಸ್ಕೃತಿ. ಮುನಿರತ್ನ ಮೊದಲು ಅವರ ಮೇಲಿರುವ ಎಲ್ಲಾ ಆರೋಪಗಳಿಂದ ಮುಕ್ತರಾಗಿ ಹೊರಬರಲಿ ಆನಂತರ ಮಿಕ್ಕ ವಿಚಾರಗಳನ್ನು ಮಾತನಾಡೋಣ” ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆಯಾಗಿ ಆ ಸ್ಥಾನಕ್ಕೆ ಡಿ.ಕೆ.ಸುರೇಶ್ ಅವರು ಬರುತ್ತಾರೆ ಎನ್ನುವ ವಿಚಾರದ ಬಗ್ಗೆ ಕೇಳಿದಾಗ, “ನಾನು ಯಾವುದೇ ಸ್ಥಾನದ ಆಕಾಂಕ್ಷಿಯಲ್ಲ. ಅಧ್ಯಕ್ಷರ ಬದಲಾವಣೆ ಎನ್ನುವುದು ಪಕ್ಷದ ವರಿಷ್ಠರ ತೀರ್ಮಾನ. ಇದಕ್ಕೆ ಅಧ್ಯಕ್ಷರು ಬದ್ಧವಾಗಿದ್ದಾರೆ, ಬೇರೆಯವರೂ ಬದ್ಧರಾಗಿ ಇರುತ್ತಾರೆ. ಇದನ್ನು ಬೇರೆಯವರು ಚರ್ಚೆ ಮಾಡುವ ಅವಶ್ಯಕತೆಯಿಲ್ಲ. ನಾನು ಯಾವುದೇ ಸ್ಥಾನಗಳ ಆಕಾಂಕ್ಷಿಯಲ್ಲ. ಜನ ನನಗೆ ವಿಶ್ರಾಂತಿ ನೀಡಿದ್ದಾರೆ. ನಾನು ಈಗ ವಿಶ್ರಾಂತಿಯಲ್ಲಿದ್ದೇನೆ” ಎಂದರು.” ಎಂದರು.

ರಾಜ್ಯ ಉಸ್ತುವಾರಿಯೂ ಬದಲಾಗುತ್ತಿದ್ದಾರೆ ಎನ್ನುವ ಬಗ್ಗೆ ಕೇಳಿದಾಗ, “ಇದರ ಬಗ್ಗೆ ನನಗೆ ಮಾಹಿತಿಯಿಲ್ಲ. ಇದು ಎಐಸಿಸಿ ಮಟ್ಟದಲ್ಲಿ ತೀರ್ಮಾನವಾಗುವ ವಿಚಾರ” ಎಂದರು. ದೇವರಾಜ ಅರಸು ಅವರ ದಾಖಲೆಯನ್ನು ಮುರಿಯಬೇಕು ಎನ್ನುವ ಸಿದ್ದರಾಮಯ್ಯ ಅವರ ಅಪೇಕ್ಷೆಯ ಬಗ್ಗೆ ಕೇಳಿದಾಗ, “ಅವರು ನಮ್ಮ ಶಾಸಕಾಂಗದ ನಾಯಕರು. ಸದ್ಯಕ್ಕೆ ಮುಖ್ಯಮಂತ್ರಿ ಬದಲಾವಣೆಯಿಲ್ಲ. ಆದರೆ ಬೇರೆಯವರು ಬೇರೆ ಬೇರೆ ರೀತಿ ವ್ಯಾಖ್ಯಾನಗಳನ್ನು ಮಾಡುತ್ತಿದ್ದಾರೆ. ಇದರ ಬಗ್ಗೆ ಯಾವುದೇ ಚರ್ಚೆಯಿಲ್ಲದೇ ಇರುವ ಕಾರಣ ಇದು ಅಪ್ರಸ್ತುತ ವಿಚಾರ” ಎಂದರು.

ಕಾವೇರಿ- ಗೋದಾವರಿ ಜೋಡಣೆ ಬಗ್ಗೆ ದೇವೇಗೌಡರ ಮಾತಿನ ಬಗ್ಗೆ ಕೇಳಿದಾಗ, “ಕಾವೇರಿ ಮತ್ತು ಗೋದಾವರಿ ನದಿ ಜೋಡಣೆ ಕನಸಿನ ಯೋಜನೆ. ಆದರೆ ಇಲ್ಲಿ ನಮ್ಮ ಕರ್ನಾಟಕ ರಾಜ್ಯದ ಪಾಲಿನ ನೀರು ಎಷ್ಟು ಎಂದು ಮೊದಲು ನಿಗದಿಯಾಗಲಿ. ಈ ಯೋಜನೆಯಿಂದ ಹೆಚ್ಚು ತಮಿಳುನಾಡು, ಆಂಧ್ರ, ತೆಲಂಗಾಣಕ್ಕೆ ಉಪಯೋಗವಾಗಲಿದೆ. ಇದು ಯಾವಾಗ ಅನುಷ್ಠಾನವಾಗುತ್ತದೆ ಎನ್ನುವ ಸ್ಪಷ್ಟತೆಯಿಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಮೊದಲು ಸ್ಪಷ್ಟತೆ ದೊರೆಯಲಿ. ದೇವೇಗೌಡರ ಕಾಳಜಿಯನ್ನು ಮೆಚ್ಚಬೇಕು. ಆದರೆ ಕರ್ನಾಟಕದ ಪಾಲಿನ ಬಗ್ಗೆ ಅವರು ಮಾತನಾಡಬೇಕಿತ್ತು. ಮೋದಿಯವರಿಗೆ ಹತ್ತಿರವಿರುವ ದೇವೇಗೌಡರು ನಮಗೆ ಹೆಚ್ಚಿನ ನೀರಿನ ಪಾಲನ್ನು ಕೊಡಿಸಬಹುದು” ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com