
ಬೆಂಗಳೂರು: ಮುಂದಿನ ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಇತ್ತೀಚಿನ ಹಿಂದೂ ಪರ ನಿಲುವು ಹಾಗೂ ಬಿಜೆಪಿ ಜೊತೆಗಿನ ಮೃಧು ಧೋರಣೆ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಅದರಲ್ಲೂ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಶಾ ಫೌಂಡೇಶನ್ ಆಯೋಜಿಸಿದ್ದ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಮೂಲಕ ಬಿಜೆಪಿಯೊಂದಿಗೆ ಡಿಕೆ ಶಿವಕುಮಾರ್ ಹತ್ತಿರವಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಜೆಪಿ ಜೊತೆಗೆ ಸೇರಿ ಸರ್ಕಾರ ರಚಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂಬ ಗುಸುಗುಸು ಕೇಳಿಬರುತ್ತಿದೆ.
ಇಂತಹ ಹೇಳಿಕೆಗಳನ್ನು ಬುಧವಾರ ತಳ್ಳಿಹಾಕಿದ ಡಿಕೆ ಶಿವಕುಮಾರ್, ಇದು ದುರುದ್ದೇಶಪೂರಿತ ಪ್ರಚಾರ. ನಾನು ಹುಟ್ಟಿನಿಂದ ಕಾಂಗ್ರೆಸ್ಸಿಗ ಮತ್ತು ನನ್ನ ನಂಬಿಕೆಗಳ ಮೇಲೆ ನಿಂತಿದ್ದೇನೆ. ನಾನು ಬಿಜೆಪಿಗೆ ಹತ್ತಿರವಾಗುತ್ತಿದ್ದೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ ಎಂದು ಹೇಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರ ಭೇಟಿ ವೇಳೆ, ಕೆಪಿಸಿಸಿ ಅಧ್ಯಕ್ಷರಾಗಿ ಮುಂದುವರಿಯುವಂತೆ ಮನವಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. "ಇದು ಕಪೋಲಕಲ್ಪಿತ ಸುದ್ದಿ' ಅವರು ಹೇಳಿದರು.
ಇಶಾ ಫೌಂಡೇಶನ್‌ನ ಧಾರ್ಮಿಕ ಕಾರ್ಯಕ್ರಮದಲ್ಲಿ ಅಮಿತ್ ಶಾ ಜೊತೆಗೆ ಪಾಲ್ಗೊಂಡು ಬಿಜೆಪಿಯತ್ತ ಒಲವು ತೋರುತ್ತಿದ್ದಾರೆ ಎಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್, “ನಾನು ಎಲ್ಲ ಧರ್ಮಗಳನ್ನು ಗೌರವಿಸುತ್ತೇನೆ. ಮಹಾತ್ಮಾ ಗಾಂಧಿ, ನೆಹರು ಮತ್ತು ಇಂದಿರಾ ಗಾಂಧಿಯವರ ನಾಯಕತ್ವದ ಮೂಲಕ ನೋಡಿದಂತೆ ಕಾಂಗ್ರೆಸ್ ಸಿದ್ಧಾಂತ ಎಲ್ಲರನ್ನೂ ಒಳಗೊಳ್ಳುತ್ತದೆ. ಸೋನಿಯಾ ಗಾಂಧಿ ಯುಗಾದಿ ಆಚರಿಸುತ್ತಾರೆ ಎಂದರು.
ನಾಯಕತ್ವ ವಿಚಾರದಲ್ಲಿ ಪಕ್ಷ ಮತ್ತು ಅದರ ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗೆ ನಿಷ್ಠೆ ವ್ಯಕ್ತಪಡಿಸಿದ ಶಿವಕುಮಾರ್, ಪಕ್ಷ ನನ್ನನ್ನು ವರ್ಷಗಳ ಕಾಲ ಬೆಳೆಸಿದೆ. ನಾನು ಅದರ ನಾಯಕತ್ವದಡಿ ಕೆಲಸ ಮಾಡುತ್ತೇನೆ ಮತ್ತು ನಾವು ಒಟ್ಟಿಗೆ ಮುಂದುವರಿಯುತ್ತೇವೆ. ಎಐಸಿಸಿ ಕಚೇರಿಯೇ ನನ್ನ ದೇವಸ್ಥಾನ. ಪಕ್ಷವನ್ನು ಬಲಪಡಿಸುವುದು ಮತ್ತು ಕರ್ನಾಟಕದ ಅಭಿವೃದ್ಧಿಯತ್ತ ನನ್ನ ಗಮನ ಕೇಂದ್ರೀಕರಿಸುವುದಾಗಿ ತಿಳಿಸಿದರು.
ಬೆಂಗಳೂರು ಸುರಂಗ ಯೋಜನೆಗೆ ಬಿಜೆಪಿ ವಿರೋಧವನ್ನು ಟೀಕಿಸಿದ ಡಿಕೆ ಶಿವಕುಮಾರ್, ಈ ಹಿಂದೆ ಕೆಜೆ ಜಾರ್ಜ್ ಉಕ್ಕು ಸೇತುವೆ ಯೋಜನೆ ಪ್ರಸ್ತಾಪಿಸಿದ್ದಾಗ ಬಿಜೆಪಿ ಅದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈಗ ಅದು ಸುರಂಗ ಯೋಜನೆ ವಿರೋಧಿಸುತ್ತಿದೆ. ಇನ್ನೂ ಒಂದೆರಡು ವರ್ಷಗಳಲ್ಲಿ ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಶಾಶ್ವತವಾದ ಪರಿಹಾರದ ಅಗತ್ಯವಿದೆ. 160 ಕಿ.ಮೀ ಮೇಲ್ಸುತುವೆ ಮತ್ತು 300 ಕಿ.ಮೀ ರಸ್ತೆ ನಿರ್ಮಾಣಕ್ಕೆ ನಾವು ಯೋಜನೆ ರೂಪಿಸಿದ್ದೇವೆ ಎಂದರು.
ಬಿಬಿಎಂಪಿಯನ್ನು ಅನೇಕ ಕಾರ್ಪೋರೇಷನ್ ಗಳಾಗಿ ವಿಭಜಿಸುವುದಕ್ಕೆ ಕುಮಾರಸ್ವಾಮಿ ವಿರೋಧವನ್ನು ಉಲ್ಲೇಖಿಸಿದ ಅವರು, ಕುಮಾರಸ್ವಾಮಿ ಕೇವಲ ರಾಜಕೀಯ ಮಾಡುತ್ತಾರೆ. ಬೆಂಗಳೂರು ಕೇವಲ ವಿಧಾನಸೌಧ, ಅದರ ಸುತ್ತಮುತ್ತಲಿನ ಪ್ರದೇಶಕ್ಕೆ ಸಿಮೀತವಾಗಿಲ್ಲ ಎಂದರು. ಇದೇ ವೇಳೆ ಉದ್ಯಮಿ ಮೋಹನ್ ದಾಸ್ ಪೈ ಟೀಕೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ಬೆಂಗಳೂರಿಗೆ ಮೋಹನ್ ದಾಸ್ ಪೈ ಕೊಡುಗೆ ನೀಡುವುದಾದರೆ ಸಕ್ರೀಯ ರಾಜಕೀಯಕ್ಕೆ ಬಂದು, ಸವಾಲುಗಳನ್ನು ಮೊದಲು ಅರ್ಥ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
Advertisement