
ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಪಾತ್ರವಿದೆ ಎಂದು ವಿರೋಧ ಪಕ್ಷಗಳು ಗಂಭೀರ ಆರೋಪ ಮಾಡಿ ತೀವ್ರ ವಿವಾದ ಎದ್ದ ನಡುವೆಯೇ ಗುತ್ತಿಗೆದಾರನ ಡೆತ್ ನೋಟ್ ನ್ನು ಬಿಜೆಪಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ರವಾನಿಸಿದೆ.
ಡೆತ್ ನೋಟಿನ ನೋಂದಾಯಿತ ಪ್ರತಿಯನ್ನು ಸಚಿವ ಖರ್ಗೆ ಅವರಿಗೂ ಕಳುಹಿಸಲಾಗಿದೆ. ಆದರೆ, ಈ ಪ್ರಕರಣದಲ್ಲಿ ಬಿಜೆಪಿಗೆ ತೀವ್ರ ಮುಖಭಂಗವಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. ಇನ್ನೊಂದೆಡೆ ಸಚಿವ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ಮುಂದುವರಿಸಿದೆ. ಇಂದು ಮಂಡ್ಯದಲ್ಲಿ ಬಿಜೆಪಿ ಹಿರಿಯ ಮುಖಂಡ ಅಶ್ವಥ್ ನಾರಾಯಣಗೌಡ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.
ಸಚಿನ್ ಪಾಂಚಾಳ್ ಬರೆದಿರುವ ಡೆತ್ ನೋಟ್‌ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರನ್ನು ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ಸರ್ಕಾರ ವಾದಿಸುತ್ತಿದೆ ಎಂದು ಬಿಜೆಪಿ ಕಿಡಿಕಾರಿದೆ. "ಈ ಡೆತ್ ನೋಟ್ ಇನ್ನೂ ನಿಮಗೆ ತಲುಪಿಲ್ಲ ಎಂದು ತೋರುತ್ತಿದೆ. ಆದ್ದರಿಂದ ನಾವು ಅದನ್ನು ಅಂಚೆ ಮೂಲಕ ಕಳುಹಿಸುತ್ತಿದ್ದೇವೆ. ದಯವಿಟ್ಟು ತಕ್ಷಣ ಓದಿ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡುವುದನ್ನು ಖಚಿತಪಡಿಸಿಕೊಳ್ಳಿ" ಎಂದು ಬಿಜೆಪಿ ರಾಹುಲ್ ಗಾಂಧಿ ಮತ್ತು ಇತರ ಕಾಂಗ್ರೆಸ್ ನಾಯಕರನ್ನು ಒತ್ತಾಯಿಸಿದೆ.
ಇದೇ ವೇಳೆ ಇಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ಎಂಎಲ್ಸಿ ರಮೇಶ್ ಬಾಬು ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ''ಬಿಜೆಪಿಯವರು ನನ್ನ ರಾಜೀನಾಮೆಗೆ ಒತ್ತಾಯಿಸಿ ತಮ್ಮ ಹೈಕಮಾಂಡ್ ನ್ನು ಮೆಚ್ಚಿಸಲು ಎಲ್ಲಾ ವಿಧಾನಗಳನ್ನು ಬಳಸುತ್ತಿದ್ದಾರೆ. ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವರ್ಚಸ್ಸಿಗೆ ಕಳಂಕ ತರುವ ಸಂಚು ಮಾಡುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಬಿಜೆಪಿಯವರು ಸಂಪೂರ್ಣ ಪ್ರಕರಣದಲ್ಲಿ ಹೈಡ್ರಾಮಾ ತೋರಿಸುತ್ತಿದ್ದು, ಕೊನೆಗೆ ಇದು ಅವರಿಗೇ ಅವಮಾನವಾಗಲಿದೆ. ನಾನು ಲಿಖಿತವಾಗಿ ನೀಡಬಲ್ಲೆ, ಘಟನೆ ನಡೆದು ಒಂದು ವಾರ ಕಳೆದಿದೆ, ಇನ್ನೂ ಯಾವುದೇ ಮಹತ್ವದ ದಾಖಲೆಯನ್ನು ಬಿಜೆಪಿಯವರು ನೀಡಿಲ್ಲ, ಸಚಿನ್ ಕುಟುಂಬಕ್ಕೆ ನ್ಯಾಯ ಒದಗಿಸುವ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪ್ರಕರಣವನ್ನು ತನಿಖೆಗಾಗಿ ವಿಶೇಷ ವಿಭಾಗದ ಸಿಐಡಿಗೆ ಹಸ್ತಾಂತರಿಸಲಾಗಿದೆ. ಅವರ ಕುಟುಂಬ ಇನ್ನೂ ಆಘಾತದಲ್ಲಿದೆ. ಸರ್ಕಾರ ಅವರ ಕುಟುಂಬದೊಂದಿಗೆ ನಿಲ್ಲುತ್ತದೆ. ಸೂಕ್ತ ಪರಿಹಾರ ಮತ್ತು ನ್ಯಾಯವನ್ನು ನೀಡುತ್ತೇವೆ ಎಂದರು.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಡೆತ್ ನೋಟ್ ಬರೆದು ಅಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ದೂಷಿಸಿದ್ದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರು ಈಶ್ವರಪ್ಪ ಹೊಣೆಗಾರರಾಗಿದ್ದಾರೆ ಮತ್ತು ಶಿಕ್ಷೆಗೆ ಗುರಿಯಾಗಬೇಕು ಎಂದು ಅವರು ನಿರ್ದಿಷ್ಟವಾಗಿ ಹೇಳಿದ್ದರು. ಅವರು ಪ್ರಧಾನಿ, ಕರ್ನಾಟಕ ಮುಖ್ಯಮಂತ್ರಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಕುಟುಂಬಕ್ಕೆ ಬೆಂಬಲವನ್ನು ಕೋರಿದರು. ಈ ಪ್ರಕರಣದಲ್ಲಿ, ಸಚಿನ್ ನನ್ನ ಹೆಸರನ್ನು ಉಲ್ಲೇಖಿಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಹಿಂದಿನ ಬಿಜೆಪಿ ಸರ್ಕಾರ ಸಂತೋಷ್ ಪಾಟೀಲ್ ಅವರ ಕುಟುಂಬವನ್ನು ಭೇಟಿ ಮಾಡಿರಲಿಲ್ಲ, ಅವರ ರಾಜಕೀಯ ಉಳಿವಿಗಾಗಿ ಈಗ ನನ್ನ ಹೆಸರನ್ನು ಎಳೆದುತರುತ್ತಿದ್ದಾರೆ. ಆಧಾರರಹಿತ ಆರೋಪಗಳನ್ನು ಮಾಡುತ್ತಾರೆ. ಮೇಲಾಗಿ ಅವರು ಸಿಎಂ ಎಂದು ಹೇಳಿಕೊಳ್ಳುತ್ತಾರೆ. ನನ್ನ ರಾಜೀನಾಮೆಯನ್ನು ತೆಗೆದುಕೊಳ್ಳುವ ಅಧಿಕಾರ ಸಿದ್ದರಾಮಯ್ಯನವರಿಗೆ ಇಲ್ಲ ಎಂದರು.
Advertisement