
ಬೆಂಗಳೂರು: ಕಾಂಗ್ರೆಸ್ ನಾಯಕರು ಮಹಿಳೆಯರಿಗೆ 2 ಸಾವಿರ ರೂ. ನೀಡುವ ಬದಲು, ಬಾಣಂತಿಯರ ಬದುಕಿಗೆ ಗ್ಯಾರಂಟಿ ನೀಡಿದರೆ ಸಾಕು ಎಂದಿರುವ ವಿಪಕ್ಷ ನಾಯಕ ಆರ್. ಅಶೋಕ್, ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯದಲ್ಲಿ ಬಾಣಂತಿಯರ ಮರಣ ಮೃದಂಗ ಇನ್ನೂ ನಿಂತಿಲ್ಲ. ಒಟ್ಟು 736 ತಾಯಂದಿರು ಮೃತಪಟ್ಟಿದ್ದಾರೆ. ಇದು ಸರ್ಕಾರದ ಪ್ರಾಯೋಜಿತ ಕೊಲೆಯಾಗಿದ್ದು, ಸರ್ಕಾರವೇ ನೇರ ಹೊಣೆಯಾಗಿದೆ. ಹುಬ್ಬಳ್ಳಿಯಲ್ಲಿ ಬಾಣಂತಿ ಸತ್ತಿದ್ದಕ್ಕೆ ಅವರ ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಿಪಟೂರಿನಲ್ಲೂ ಒಬ್ಬ ಬಾಣಂತಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಪೂರೈಸಿದ ಐವಿ ದ್ರಾವಣದಿಂದಾಗಿ ಬಾಣಂತಿಯರು ಮೃತರಾಗುತ್ತಿದ್ದಾರೆ. ಕಾಂಗ್ರೆಸ್‌ನ ಸಮಾವೇಶ ನಡೆದಾಗಲೇ ಬಾಣಂತಿಯರು ಮೃತಪಟ್ಟಿದ್ದರೂ ಅಲ್ಲಿಗೆ ಹಿರಿಯ ನಾಯಕರು ಭೇಟಿ ನೀಡಿಲ್ಲ ಎಂದು ದೂರಿದರು.
ಸರ್ಕಾರ ಎಲ್ಲವನ್ನೂ ಸರಿಯಾಗಿ ಮಾಡಿದೆ ಎಂದು ಸ್ಪಷ್ಟನೆ ನೀಡಿದೆ. ಆದರೆ ಔಷಧಿ ಕಂಪನಿ ಪೂರೈಸಿದ ಔಷಧದ ವಿಚಾರದಲ್ಲಿ ಡ್ರಗ್ ಕಂಟ್ರೋಲರ್ ಮಾಡಿದ ತಪ್ಪುಗಳ ಬಗ್ಗೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ನೋಟಿಸ್ ನೀಡಿದ್ದಾರೆ. ಆದರೆ ಅಧಿವೇಶನದಲ್ಲಿ ಮಾತ್ರ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಎಲ್ಲ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ. ಡೆತ್ ಆಡಿಟ್ ಬಗ್ಗೆ ಸರ್ಕಾರ ಹೇಳಿದ್ದರೂ, ಈವರೆಗೆ ಆ ವರದಿ ಬಂದಿಲ್ಲ. ಅಧಿವೇಶನದಲ್ಲಿ ನುಣುಚಿಕೊಳ್ಳಲು ಸರ್ಕಾರ ಉತ್ತರ ನೀಡಿದೆಯೇ ಹೊರತು ಯಾವುದೇ ಕಠಿಣ ಕ್ರಮ ವಹಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಐವಿ ದ್ರಾವಣವನ್ನು ರಾಜ್ಯ ಸರ್ಕಾರ ಪೂರೈಸುತ್ತದೆ. ಇದರಲ್ಲಿ ಕೇಂದ್ರ ಸರ್ಕಾರದ ಪಾತ್ರವಿಲ್ಲ. ರಾಜ್ಯ ಸರ್ಕಾರ ಔಷಧಿಯನ್ನು ಪರೀಕ್ಷಿಸಬೇಕು. ಬೇರೆ ರಾಜ್ಯಗಳಲ್ಲಿ ಎಲ್ಲೂ ಈ ಸಾವುಗಳು ಕಂಡುಬಂದಿಲ್ಲ. ಕರ್ನಾಟಕದಲ್ಲಿ ಮಾತ್ರ ಈ ಘಟನೆಗಳು ನಡೆಯುತ್ತಿದೆ. 462 ಔಷಧಿಗಳು ಕಳಪೆ ಎಂದು ಸರ್ಕಾರವೇ ಹೇಳಿದೆ. ಆದರೂ ಇದೇ ಔಷಧಿಗಳನ್ನು ಆಸ್ಪತ್ರೆಗೆ ಪೂರೈಸಲಾಗಿದೆ ಎಂದು ದೂರಿದರು. ಒಂದು ವರ್ಷದಲ್ಲಿ ಬಿಜೆಪಿ ಬಹಳಷ್ಟು ಹೋರಾಟಗಳನ್ನು ಮಾಡಿದೆ. ಎಲ್ಲ ಹೋರಾಟಗಳನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯಲಾಗಿದೆ. ಬಾಣಂತಿಯರ ಸಾವಿನ ವಿರುದ್ಧದ ಹೋರಾಟವನ್ನು ನಿಲ್ಲಿಸಲ್ಲ ಎಂದರು.
ಜ.4ಕ್ಕೆ ಕಲಬುರಗಿಯಲ್ಲಿ ಪ್ರತಿಭಟನೆ: ಜನವರಿ 4 ರಂದು ಕಲಬುರ್ಗಿಯಲ್ಲಿ ಬಿಜೆಪಿ ವತಿಯಿಂದ ಬೃಹತ್ ಹೋರಾಟ ನಡೆಯಲಿದೆ. ಸಚಿವ ಪ್ರಿಯಾಂಕ್ ಖರ್ಗೆ ಹೆಸರು ಮೃತ ಸಚಿನ್ ಅವರ ಡೆತ್ ನೋಟ್ ನಲ್ಲಿದೆ. ಸಚಿವರ ಆಪ್ತನೇ ಈ ಘಟನೆಗೆ ಕಾರಣ. ಆದರೆ ಎಐಸಿಸಿ ಅಧ್ಯಕ್ಷರ ಮಗನಾಗಿರುವುದರಿಂದ ಅವರ ರಾಜೀನಾಮೆ ಪಡೆಯದೆ ಸಿಎಂ ಸಿದ್ದರಾಮಯ್ಯ ಗಡಗಡ ನಡುಗುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸರಣಿ ಆತ್ಮಹತ್ಯೆ ನಡೆಯುತ್ತಿದೆ. ಸರ್ಕಾರದ ಒತ್ತಡ ತಾಳಲಾಗದೆ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದು ಕೊಲೆಗಡುಕ ಸರ್ಕಾರವಾಗಿದೆ ಎಂದರು. ಗೋ ರಕ್ಷಣೆ ಎನ್ನುವುದು ಭಾರತದ ಸಂಸ್ಕೃತಿ. ಇದಕ್ಕಾಗಿ ಬಿಜೆಪಿ ಸರ್ಕಾರ ಯೋಜನೆ ರೂಪಿಸಿತ್ತು. ಈಗಿನ ಪಾಪರ್ ಸರ್ಕಾರ ಗೋವಿನ ಅನ್ನಕ್ಕೂ ಕನ್ನ ಹಾಕಿದೆ ಎಂದು ದೂರಿದರು.
Advertisement