
ಬೆಂಗಳೂರು: ಆಡಳಿತ ಪಕ್ಷ ಕಾಂಗ್ರೆಸ್ ನಲ್ಲಿ ಡಿನ್ನರ್ ಸಭೆ ಬಹಳ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಭೆ ನಡೆದಿತ್ತು. ನಂತರ ಗೃಹ ಸಚಿವ ಡಾ ಜಿ ಪರಮೇಶ್ವರ್ ಆಯೋಜಿಸಿದ್ದರು. ಆದರೆ ಅದಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಡಾ. ಪರಮೇಶ್ವರ್ ಅವರು ಎಸ್ಸಿ, ಎಸ್ಟಿ ಶಾಸಕರು, ಸಚಿವರ ಡಿನ್ನರ್ ಮೀಟಿಂಗ್ ಆಯೋಜನೆ ಮಾಡಲು ಮುಂದಾಗಿದ್ದರು. ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರು ಸಭೆ ಸೇರಿದ ವಿಚಾರ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಪರಮೇಶ್ವರ್ ಸಹ ಡಿನ್ನರ್ ಮೀಟಿಂಗ್ ನಡೆಸಲು ಮುಂದಾಗಿದ್ದರು. ಹೊಸ ವರ್ಷಕ್ಕೆ ಕುಟುಂಬಸ್ಥರೊಂದಿಗೆ ವಿದೇಶ ಪ್ರವಾಸದಲ್ಲಿದ್ದ ಡಿಸಿಎಂ ಡಿ ಕೆ ಶಿವಕುಮಾರ್ ದೆಹಲಿಗೆ ಆಗಮಿಸಿ ಇದನ್ನು ಹೈಕಮಾಂಡ್ ಗಮನಕ್ಕೆ ತಂದು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪರಮೇಶ್ವರ್ ಡಿನ್ನರ್ ಮೀಟ್ಗೆ ಹೈಕಮಾಂಡ್ ಬ್ರೇಕ್ ಹಾಕಿದೆ ಎನ್ನಲಾಗುತ್ತಿದೆ.
ಡಿನ್ನರ್ ಸಭೆ ಮುಂದೂಡುವಂತೆ ಕಾಂಗ್ರೆಸ್ ಹೈಕಮಾಂಡ್ನಿಂದ ಬಂದಿರುವ ಸೂಚನೆಯ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ನಮ್ಮ ಸಭೆಯನ್ನು ಸಹಿಸುವುದಿಲ್ಲವೆಂದು ಯಾರೂ ಹೇಳಿಲ್ಲ ನಮ್ಮದೇ ಆಂತರಿಕ ಸಭೆಯಾಗಿರುವುದರಿಂದ ದೆಹಲಿ ನಾಯಕರಿಗೆ ಹೇಳುವ ಅವಶ್ಯಕತೆಯಿಲ್ಲ ಎಂದು ನಾವು ಹೇಳಿರಲಿಲ್ಲ. ಸಭೆಯನ್ನು ಮುಂದೂಡಿಕೆ ಮಾಡಲಾಗಿದೆ ಅಷ್ಟೆ. ಸಭೆ ನಡೆಸುತ್ತೇವೆ ಎಂದಿದ್ದಾರೆ.
ಔತಣಕೂಟ ರದ್ದು ಮಾಡಿಲ್ಲ, ಮುಂದೂಡಿಕೆಯಷ್ಟೇ: ಪರಮೇಶ್ವರ್
ಔತಣಕೂಟವನ್ನು ರದ್ದು ಮಾಡಿಲ್ಲ, ಮುಂದೂಡಿಕೆ ಮಾಡಿದ್ದೇವೆ ಅಷ್ಟೆ. ನಮ್ಮ ಔತಣಕೂಟಕ್ಕೆ ಹೈಕಮಾಂಡ್ ವಿರೋಧ ಇಲ್ಲ. ಚಿತ್ರದುರ್ಗ ಸಮಾವೇಶ ಬಗ್ಗೆ ಚರ್ಚಿಸಲು ಸಭೆ ಕರೆದಿದ್ದೆವು. ಔತಣಕೂಟ ಬಗ್ಗೆ ನಾವು ದೆಹಲಿಗೆ ಏನೂ ಹೇಳಿರಲಿಲ್ಲ. ಶಾಸಕರ ಮೀಟಿಂಗ್ ಅಂದಾಗ ಅವರ ಗಮನಕ್ಕೆ ಹೋಗುತ್ತದೆ. ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲ ಕರೆ ಮಾಡಿ ಅವರೂ ಸಹ ಭಾಗವಹಿಸಲು ಉತ್ಸುಕವಾಗಿರುವುದಾಗಿ ತಿಳಿಸಿದರು. ಹಾಗಾಗಿ ಅವರಿಗೂ ಆಹ್ವಾನ ಕೊಟ್ಟಿದ್ದೇವೆ. ಮುಂದೆ ಸಮಯ ಕೋಡುತ್ತೇನೆ ಎಂದು ನಮಗೆ ಹೇಳಿದ್ದಾರೆ. ಹಾಗಾಗಿ ಔತಣಕೂಟ ಮುಂದಕ್ಕೆ ಹಾಕಿದ್ದೇವೆ, ರದ್ದು ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಊಟಕ್ಕೂ ಮೊದಲು ಚರ್ಚೆ ಮಾಡುತ್ತೇವೆ. ಡಿನ್ನರ್ ಅಂದ್ರೆ ಏನೇನೋ ವ್ಯಾಖ್ಯಾನ ಮಾಡುತ್ತೀರಿ. ಸಭೆ ಇದ್ದಾಗ ಊಟ ಮಾಡುವುದು ಸಹಜ. ಸ್ವಲ್ಪ ದಿನ ಕಾಯೋಣ, ಸಭೆ ಅವರಿಗೆ ಇಷ್ಟ ಇತ್ತೋ ಅಥವಾ ಇಲ್ಲವೋ ಎಂಬುದು ಎಲ್ಲವೂ ಗೊತ್ತಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.
ಹೈಕಮಾಂಡ್ಗೆ ಡಿಸಿಎಂ ಡಿಕೆ ಶಿವಕುಮಾರ್ ದೂರು ನೀಡಿದ್ದಾರೆಯೇ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, ಆ ಬಗ್ಗೆ ನನಗೆ ಗೊತ್ತಿಲ್ಲ. ನಮ್ಮ ಈ ಸಭೆಗೆ ಡಿಸಿಎಂ ಡಿಕೆ ಶಿವಕುಮಾರ್ರನ್ನೂ ಕರೆಯಬೇಕು ಎಂದು ಚರ್ಚೆ ಆಗಿತ್ತು. ರಾಜಕಾರಣ ಮಾಡುವುದಾದರೆ ಓಪನ್ ಆಗಿಯೇ ಮಾಡುತ್ತೇವೆ. ಮುಚ್ಚಿಟ್ಟು ಮಾಡುವಂಥದ್ದೇನೂ ಇಲ್ಲ ಎಂದರು.
ತಕ್ಕ ಉತ್ತರ ಕೊಡುವ ಶಕ್ತಿ ಇದೆ
ದಲಿತ ಸಮುದಾಯದ ಮೇಲಿನ ದೌರ್ಜನ್ಯ ಬಗ್ಗೆ ಚರ್ಚೆ ಆಗಬೇಕಿದೆ. ಯಾರೂ ನಮ್ಮ ಸಭೆಯನ್ನು ಸಹಿಸುವುದಿಲ್ಲ ಎಂದು ಹೇಳಿಲ್ಲ. ನಮ್ಮ ನಮ್ಮ ಸಭೆ ಸಹಿಸಲ್ಲ ಅಂದರೆ ಅದಕ್ಕೆ ತಕ್ಕ ಉತ್ತರ ಕೊಡುತ್ತೇವೆ. ನಮಗೆ ಆ ಶಕ್ತಿ ಇದೆ ಎಂದು ಪರಮೇಶ್ವರ್ ಎಚ್ಚರಿಕೆ ನೀಡಿದರು.
ಸದ್ಯದ ಮಟ್ಟಿಗೆ ಸಭೆ ಮುಂದಕ್ಕೆ ಹಾಕಿದ್ದೇವೆ. ಮತ್ತೆ ದಿನಾಂಕ ನಿಗದಿ ಆದಾಗ ತಿಳಿಸುತ್ತೇವೆ. ಏನಾಗಿದೆ ಎಂದು ಎಲ್ಲವನ್ನೂ ಹೇಳಲು ಆಗುವುದಿಲ್ಲವಲ್ಲ ಎಂದರು.
Advertisement