
ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ಮುಂದುವರೆಸಿದ್ದಾರೆ. 'ಬಿಜೆಪಿ ರಾಜ್ಯಾಧ್ಯಕ್ಷನಾಗಲು ಲಾಯಕ್ಕಿಲ್ಲ. ಅವನನ್ನು ನಾವ್ಯಾರು ಒಪ್ಪಲ್ಲ ಎಂದು ಭಾನುವಾರ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ವ್ಯಾಮೋಹ ಬಿಟ್ಟು ಪಕ್ಷ ಸಂಘಟನೆಯತ್ತ ಗಮನ ಹರಿಸುವಂತೆ ಸಲಹೆ ನೀಡಿದರು.
ವಿಜಯೇಂದ್ರನನ್ನು ಬಿಜೆಪಿ ಅಧ್ಯಕ್ಷನಾಗಿ ಒಪ್ಪಲು ಸಾಧ್ಯವಿಲ್ಲ. ನಕಲಿ ಸಹಿ ಮೂಲಕ ಅಪ್ಪನನ್ನು ಜೈಲಿಗೆ ಕಳುಹಿಸಿದವರನ್ನು ನಾವು ಹೇಗೆ ಒಪ್ಪಲು ಸಾಧ್ಯ ಎಂದು ಪ್ರಶ್ನಿಸಿದರು. ನಮ್ಮ ಪಕ್ಷ ಇದಕ್ಕೆಲ್ಲಾ ಅವಕಾಶ ಕೊಡಲ್ಲ. ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಲಿದೆ ಎಂದರು.
ಯಡಿಯೂರಪ್ಪಗೆ ಮನೆಯಲ್ಲಿ ಕಿಮ್ಮತ್ತಿಲ್ಲ. ಹೊರಗಡೆ ಪೂಜ್ಯ ತಂದೆ, ಮನೆಯಲ್ಲಿ ಮುದಿಯಾ ಎಂದು ವಿಜಯೇಂದ್ರ ಕರೆಯುತ್ತಾನೆ. ಯಡಿಯೂರಪ್ಪ ಕೂಡ ಎಷ್ಟು ಜನರಿಗೆ ಮೋಸ ಮಾಡಿಲ್ಲ. ಬಿಬಿ ಶಿವಪ್ಪ, ಮಲ್ಲಿಕಾರ್ಜುನಯ್ಯ ಅವರಿಗೆ ಅನ್ಯಾಯ ಮಾಡಿದ್ದಾರೆ. ಸುಮ್ಮನೇ ಮೊಮ್ಮಕ್ಕಳ ಜೊತೆ ಆಟ ಆಡುತ್ತಾ ಕೂಡಲಿ ಎಂದು ವಾಗ್ದಾಳಿ ನಡೆಸಿದ ಯತ್ನಾಳ್, ರಮೇಶ್ ಜಾರಕಿಹೊಳಿ ಅವರು ಮಾತನಾಡಿರುವುದರಲ್ಲಿ ತಪ್ಪೇನಿಲ್ಲ ಎಂದು ಸಮರ್ಥಿಸಿಕೊಂಡರು.
ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿಜಯೇಂದ್ರ, ಪಕ್ಷದ ಹೈಕಮಾಂಡ್ ಆಶೀರ್ವಾದ ಮಾಡಿದ್ದರಿಂದ ಕಳೆದ ಒಂದು ವರ್ಷದಿಂದ ಈ ಹುದ್ದೆಯಲ್ಲಿದ್ದೇನೆ. ದೇವರು ಅವರಿಗೆ ಒಳಿತು ಮಾಡಲಿ ಎಂದು ಹೇಳಿದರು.
Advertisement