ಯಾರ ಹಣೆಯಲ್ಲಿ ಏನು ಬರೆದಿದೆಯೋ ಕಾದು ನೋಡೋಣ; ಯುವ ಪತ್ರಕರ್ತರು, ಹಿರಿಯರಿಂದ ಸರಿಯಾಗಿ ತರಬೇತಿ ಪಡೆಯಿರಿ: ಡಿ.ಕೆ ಶಿವಕುಮಾರ್

ನಿಮಗೆ ತಲೆ ಕೆಟ್ಟಿದೆ. ನೀವು ಮಾಧ್ಯಮಗಳು ನಿಮ್ಮದೇ ಆದ ಘನತೆ ಗಳಿಸಿದ್ದೀರಿ. ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದವರು ಯಾರು? ಯಾರೋ ಹೇಳಿದ ಮಾತುಗಳಿಗೆ ನಾನು ಉತ್ತರ ನೀಡಲು ಆಗುವುದಿಲ್ಲ. ಯುವ ಪತ್ರಕರ್ತರು, ನಿಮ್ಮಲ್ಲಿರುವ ಹಿರಿಯರಿಂದ ಸರಿಯಾಗಿ ತರಬೇತಿ ಪಡೆಯಿರಿ.
Congress leaders in belagavi rally
ಬೆಳಗಾವಿಯಲ್ಲಿ ಗಾಂಧಿ ಪ್ರತಿಮೆ ಅನಾವರಣ
Updated on

ಬೆಳಗಾವಿ: ಗಾಂಧೀಜಿ ಹಾಗೂ ಕಾಂಗ್ರೆಸ್ ಕೊಟ್ಟ ಅಹಿಂಸೆಯ ಆದರ್ಶವನ್ನು ವಿಶ್ವ ಒಪ್ಪಿದೆ. ಇದನ್ನು ಉಳಿಸಿಕೊಂಡು, ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಬೆಳಗಾವಿಯ ಸರ್ಕಿಟ್ ಹೌಸ್ ಬಳಿ ಮಾತನಾಡಿದ ಅವರು, "ಗಾಂಧೀಜಿ ಅವರ ತತ್ವ ಆದರ್ಶಗಳು, ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ ಉಳಿಸಬೇಕು. ಇದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಅಲ್ಲ, ದೇಶದ ಕಾರ್ಯಕ್ರಮ. ಗಾಂಧೀಜಿ ಅವರು ನಮ್ಮೊಂದಿಗೆ ಇಲ್ಲದಿದ್ದರೂ, ತತ್ವ ಸಿದ್ಧಾಂತಗಳ ಮೂಲಕ ಸದಾ ಜೀವಂತವಾಗಿರುತ್ತಾರೆ. ಗಾಂಧೀಜಿ ಅವರ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗಬೇಕು" ಎಂದು ತಿಳಿಸಿದರು.

ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನು ಮುಂದೂಡಲಾಗಿತ್ತು. ಹೀಗಾಗಿ ಇಂದು ಜೈ, ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ನಡೆಸುತ್ತಿದ್ದೇವೆ. ಈ ಕಾರ್ಯಕ್ರಮದ ಮೂಲಕ ಕರ್ನಾಟಕ ಹಾಗೂ ಬೆಳಗಾವಿ ಇತಿಹಾಸದ ಪುಟ ಸೇರಲಿವೆ" ಎಂದರು.

ಗಾಂಧೀಜಿ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು, ನಂತರ ಅಂಬೇಡ್ಕರ್ ಅವರು ನಮಗೆ ಸಂವಿಧಾನ ಕೊಟ್ಟರು. ಇವರ ತತ್ವ ಆದರ್ಶ, ಸಾಮಾಜಿಕ ನ್ಯಾಯ ಉಳಿಸಲು ಇಂದಿನ ಸಮಾವೇಶ ಅಗತ್ಯವಾಗಿದೆ. ಸ್ವಾತಂತ್ರ್ಯ ಬಂದ ನಂತರ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲಾಗಿದ್ದು, ಅದರಿಂದಲೇ ನಾವು ಇಂದು ನಾಯಕರಾಗಿದ್ದೇವೆ. ಇದನ್ನು ಉಳಿಸಿಕೊಳ್ಳಲು ನಾವು ಇಂದು ಸೇರಿದ್ದೇವೆ" ಎಂದು ತಿಳಿಸಿದರು.

ಗಾಂಧಿ ಹಾಗೂ ಅಂಬೇಡ್ಕರ್ ಹೆಸರಲ್ಲಿ ಕಾಂಗ್ರೆಸ್ ಜಾತ್ರೆ ಮಾಡುತ್ತಿದೆ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಹೌದು, ನಾವು ಜಾತ್ರೆ ಮಾಡುತ್ತಿದ್ದೇವೆ. ಇಲ್ಲ ಎಂದವರು ಯಾರು? ಒಳ್ಳೆಯದಾಗಬೇಕು, ಸಂಸ್ಕೃತಿ ಉಳಿಯಲು ಜಾತ್ರೆ ಮಾಡಲಾಗುತ್ತದೆ. ಸಂಕ್ರಾಂತಿ ಸಮಯದಲ್ಲಿ ಹೊಸ ಸಂಕ್ರಮಣ, ಹೊಸ ಹುರುಪು ರೈತರ ಬದುಕಿಗೆ ಒಳ್ಳೆಯದಾಗಲಿ ಎಂದು ಮಾಡುತ್ತಾರೆ. ಅದೇ ರೀತಿ ಗಾಂಧೀಜಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ನೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ನಾವು ಜಾತ್ರೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ನಾನು ಬಿಜೆಪಿ ನಾಯಕರ ಟೀಕೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಅವರಿಗೆ ಸ್ವಾತಂತ್ರ್ಯ ಚಳುವಳಿ ಎಂದರೆ ಏನು ಎಂಬುದೇ ಗೊತ್ತಿಲ್ಲ. ಈ ಚಳುವಳಿಯಲ್ಲಿ ಕಾಂಗ್ರೆಸಿಗರು ಮಾಡಿದ ತ್ಯಾಗ ಬಲಿದಾನಗಳ ಬಗ್ಗೆ ಅವರಿಗೆ ಅರಿವಿಲ್ಲ. ಗೋಡ್ಸೆ ಸಿದ್ಧಾಂತ ಪಕ್ಷದವರಿಂದ ನಾವು ಮಾತು ಕೇಳಬೇಕಿಲ್ಲ. ಈ ದೇಶಕ್ಕೆ ಗಾಂಧೀಜಿ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರ ಪ್ರಾಣತ್ಯಾಗ, ಸೋನಿಯಾ ಗಾಂಧಿ ಅವರ ಅಧಿಕಾರ ತ್ಯಾಗದ ಬಗ್ಗೆ ನಮಗೆ ಗೊತ್ತಿದೆ" ಎಂದು ಹೇಳಿದರು. ನಾನು ಅಂತಹ ದೊಡ್ಡ ನಾಯಕನಾಗಲು ಆಗುವುದಿಲ್ಲ. ನಾನು ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತ. ಯಾರ ಹಣೆಯಲ್ಲಿ ಏನು ಬರೆದಿದೆಯೋ ಕಾದುನೋಡೋಣ" ಎಂದರು.

ಗಾಂಧಿ ಹತ್ಯೆ ಬಗ್ಗೆ ನೆಹರೂ ಅವರ ಮೇಲೆ ಯತ್ನಾಳ್ ಅವರು ಮಾಡಿರುವ ಆರೋಪದ ಬಗ್ಗೆ ಕೇಳಿದಾಗ, "ನಾನು ಇಂತಹ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ. ಇಂತಹ ಹೇಳಿಕೆಗಳು ಆ ಪಕ್ಷದ ಮನಸ್ಥಿತಿ ತೋರುತ್ತದೆ. ಅವರ ಹೇಳಿಕೆ ಬಗ್ಗೆ ಅವರ ಪಕ್ಷವೇ ಉತ್ತರ ನೀಡಬೇಕು ಎಂದರು.

ಕಾರ್ಯಕ್ರಮದ ಮೂಲಕ ಪಕ್ಷದಲ್ಲಿ ಒಗ್ಗಟ್ಟು ಮೂಡುವುದೇ ಎಂದು ಕೇಳಿದಾಗ, "ನಿಮಗೆ ತಲೆ ಕೆಟ್ಟಿದೆ. ನೀವು ಮಾಧ್ಯಮಗಳು ನಿಮ್ಮದೇ ಆದ ಘನತೆ ಗಳಿಸಿದ್ದೀರಿ. ನಮ್ಮಲ್ಲಿ ಒಗ್ಗಟ್ಟಿಲ್ಲ ಎಂದು ಹೇಳಿದವರು ಯಾರು? ಯಾರೋ ಹೇಳಿದ ಮಾತುಗಳಿಗೆ ನಾನು ಉತ್ತರ ನೀಡಲು ಆಗುವುದಿಲ್ಲ. ಯುವ ಪತ್ರಕರ್ತರು, ನಿಮ್ಮಲ್ಲಿರುವ ಹಿರಿಯರಿಂದ ಸರಿಯಾಗಿ ತರಬೇತಿ ಪಡೆಯಿರಿ" ಎಂದು ಮಾಧ್ಯಮದವರಿಗೆ ಕಿವಿಮಾತು ಹೇಳಿದರು.

ರಾಜ್ಯದಲ್ಲಿ ದರೋಡೆ ಪ್ರಕರಣಗಳು ಹೆಚ್ಚುತ್ತಿವೆ ಎಂದು ಕೇಳಿದಾಗ, "ಈ ವಿಚಾರವಾಗಿ ಗೃಹಸಚಿವರು ಉತ್ತರ ನೀಡುತ್ತಾರೆ" ಎಂದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com