
ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಂತೆ ಹಿಂದಿನ ಯಾವುದೇ ಸರ್ಕಾರ ಸಂಸತ್ತಿನೊಳಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ಹೇಳಿದ್ದಾರೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧೀವೇಶನದ ತಮಾನೋತ್ಸವದ ನೆನಪಿಗಾಗಿ ಇಂದು ಸಿಪಿಇಡ್ ಮೈದಾನದಲ್ಲಿ ಆಯೋಜಿಸಿದ್ದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶದಲ್ಲಿ ಮಾತನಾಡಿದ ಪ್ರಿಯಾಂಕಾ, ಬಿಜೆಪಿ ಸಂವಿಧಾನ ಮತ್ತು ಅದರ ಸಂಸ್ಥೆಗಳನ್ನು "ದುರ್ಬಲಗೊಳಿಸಲು" ಬಯಸಿದೆ ಎಂದು ಆರೋಪಿಸಿದರು.
"ಹಿಂದೆ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳ ಸರ್ಕಾರಗಳು ಕೇಂದ್ರದಲ್ಲಿ ಬಂದು ಹೋಗಿವೆ. ಆದರೆ ಯಾವುದೇ ಸರ್ಕಾರವು ಸಂಸತ್ತಿನಲ್ಲಿ ನಿಂತು ಅಂಬೇಡ್ಕರ್ ಅವರನ್ನು ಅವಮಾನಿಸಿಲ್ಲ" ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಸಂವಿಧಾನ ಕೇವಲ ಪುಸ್ತಕ ಅಲ್ಲ. ಎಲ್ಲ ಸಹೋದರ, ಸಹೋದರಿಯರೇ ತಮ್ಮೆಲ್ಲರನ್ನು ಕಾಪಾಡುವ ರಕ್ಷಾ ಕವಚ. ಇಂತಹ ಅಂಬೇಡ್ಕರ್ ಅವರನ್ನು ಸಂಸತ್ತಿನಲ್ಲಿ ನಿಂತು ಕೇಂದ್ರ ಗೃಹಸಚಿವ ಅಮಿತ್ ಶಾ ಅಪಮಾನ ಮಾಡಿದ್ದಾರೆ. ಇಂಥ ಸರ್ಕಾರ ಮತ್ತು ಮಂತ್ರಿಯನ್ನು ಹಿಂದೆಂದೂ ನೋಡಿರಲಿಲ್ಲ. ಸಂವಿಧಾನ ಮತ್ತು ಅಂಬೇಡ್ಕರ್ ಅವರ ಮೇಲಿನ ಅಪಮಾನ ಸಹಿಸಬೇಡಿ. ಸಂವಿಧಾನ ರಕ್ಷಿಸಲು ತಮ್ಕ ಪ್ರಾಣ ತ್ಯಾಗ ಮಾಡುವ ಸಂಕಲ್ಪ ಮಾಡಿರಿ ಎಂದು ಕರೆ ನೀಡಿದರು.
ಆರ್‌ಎಸ್‌ಎಸ್ ಸದಸ್ಯರು ಅಂಬೇಡ್ಕರ್ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿದ್ದಾರೆ ಮತ್ತು ಅವರನ್ನು ಟೀಕಿಸಿದ್ದಾರೆ ಎಂದು ವಾದ್ರಾ ಆರೋಪಿಸಿದ್ದಾರೆ.
ಆರ್‌ಎಸ್‌ಎಸ್‌ನ ಸಂತತಿಯಾಗಿರುವ ಬಿಜೆಪಿ ಅಂಬೇಡ್ಕರ್ ಮತ್ತು ಅವರ ಸಂವಿಧಾನವನ್ನು "ಅವಮಾನಿಸುವ" ಧೈರ್ಯ ಮಾಡಿದೆ. ಆದರೆ ಈ ದುಷ್ಟ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ. ನಮ್ಮ ಜೊತೆ ನೀವು ಹೋರಾಟಕ್ಕೆ ಸಂಕಲ್ಪ ತೊಡುವಂತೆ ಕಾಂಗ್ರೆಸ್ ನಾಯಕಿ ಕರೆ ನೀಡಿದರು.
2024ರ ಚುನಾವಣೆಯಲ್ಲಿ ಹಲವು ಕಡೆಗಳಲ್ಲಿ ಸಂವಿಧಾನ ಬದಲಾಯಿಸುತ್ತೇವೆ ಎಂದು ಭಾಷಣ ಮಾಡಿದ್ದರು. ಅವರು, ದೇಶದ ಮೂಲ ತತ್ವ, ಸಿದ್ಧಾಂತ, ವಿವಿಧತೆಯಲ್ಲಿ ಏಕತೆಗಳ ಮೇಲೆ ಆಕ್ರಮಣ ಮಾಡಿ, ಅವುಗಳನ್ನು ಮುಗಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.
ಆರ್‌ಎಸ್‌ಎಸ್ ಸಂಸ್ಥಾಪಕರು ಸಂವಿಧಾನ ವಿರೋಧಿ ಆಗಿದ್ದರು. ಮೊದಲ ಬಾರಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗ ಸಂವಿಧಾನ ವಿಮರ್ಶೆ ಶುರು ಮಾಡಿದರು. ಮೀಸಲಾತಿ, ಸಾಮಾಜಿಕ ನ್ಯಾಯದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ತಮಗೆ ಶಕ್ತಿ ತುಂಬಿದ ಆರ್ಟಿಐ ಬದಲಿಸುತ್ತಿದ್ದಾರೆ. ಲೋಕಪಾಲ್ ಕಾಯ್ದೆ, ಚುನಾವಣೆ ಆಯೋಗದ ಶಕ್ತಿ ಕುಗ್ಗಿಸಿದ್ದಾರೆ. ಬಿಜೆಪಿ ಸರ್ಕಾರದ ರಾಜ್ಯಗಳಲ್ಲಿ ಮಹಿಳೆಯರ ಮೇಲೆ ಹಲ್ಲೆ ಮಾಡಿದವರ ಪರ ನಿಲ್ಲುತ್ತಾರೆ. ಕಾರ್ಮಿಕರ ಹಕ್ಕು ಕಸಿದು ಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು
Advertisement