
ಬೆಂಗಳೂರು: ಮುಂದಿನ ಸಿಎಂ ಬಗ್ಗೆ ಮಾತನಾಡದಂತೆ 'ಎಲ್ಲರೂ ಬಾಯಿ ಮುಚ್ಚಿಕೊಂಡು ಇರಬೇಕು' ಎಂಬ ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಎಚ್ಚರಿಕೆ ನೀಡಿದ್ದರೂ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಚರ್ಚೆಗಳು ಮುಂದುವರೆದಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಆಗಬೇಕು ಎಂದು ಬೆಳಗಾವಿಯ ಹಿರೇ ಬಾಗೇವಾಡಿಯ ಕಾಂಗ್ರೆಸ್ ನಾಯಕ ಪರಶುರಾಮ್ ಪೂಜಾರಿ ಮತ್ತು ಅವರ ಬೆಂಬಲಿಗರು ಸಿಂಗಧೂರು ಚೌಡೇಶ್ವರಿ ದೇವಾಲಯದ ಬಳಿ ಬುಧವಾರ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶಕ್ತಿ ಪ್ರದರ್ಶನ ನಡೆಸಿದರು. ಜಾರಕಿಹೊಳಿ ಭಾವಚಿತ್ರವಿರುವ ಫೋಸ್ಟರ್ ಗಳನ್ನು ಹಿಡಿದುಕೊಂಡು ಪೊಜೆ ಸಲ್ಲಿಸುವ ಮೂಲಕ ಸತೀಶ್ ಜಾರಕಿಹೊಳಿ ಮುಂದಿನ ಸಿಎಂ ಎಂಬ ಸಂದೇಶ ರವಾನಿಸಿದರು.
ಮಂಗಳವಾರ ಗಾಂಧಿ ಸಮಾವೇಶದ ವೇದಿಕೆ ಬಳಿ ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂದು ಅವರ ಪರ ಬೆಂಬಲಿಗರು ಘೋಷಣೆ ಕೂಗಿದ್ದರು. ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ದಿಗಂಬರ ಜೈನ ಸನ್ಯಾಸಿ ಗುಣಧರ ನಂದಿ ಅವರು ಭವಿಷ್ಯ ನುಡಿದಿದ್ದರು. ಮಂಗಳವಾರ ಸಂಜೆ ಧಾರವಾಡ ಜಿಲ್ಲೆಯ ವರೂರಿನಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಜೈನ ಸನ್ಯಾಸಿ, ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದರು. ಅದನ್ನು ಆಶೀರ್ವಾದ ಎಂದು ಪರಿಗಣಿಸುವುದಾಗಿ ಶಿವಕುಮಾರ್ ಹೇಳಿದ್ದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಪಕ್ಷ ನೀಡುವ ಜವಾಬ್ದಾರಿಯನ್ನು ಆಧರಿಸಿ ಕೆಲಸ ಮಾಡುತ್ತೇನೆ. ಯಾವುದೇ ಹುದ್ದೆ ಹಿಂದೆ ಹೋಗಲ್ಲ. ನನ್ನ ಕೆಲಸದ ಕಡೆಗೆ ಮಾತ್ರ ಗಮನ ನೀಡುತ್ತೇನೆ ಎಂದು ಹೇಳಿದ್ದರು.
ಕಾಂಗ್ರೆಸ್ ಮೇ 2023ರಲ್ಲಿ ಅಧಿಕಾರಕ್ಕೆ ಬರುವಾಗ ಸಿದ್ದರಾಮಯ್ಯ ಮೊದಲು ಎರಡೂವರೆ ವರ್ಷ ಆಳ್ವಿಕೆ ನಡೆಸಬೇಕು, ತದನಂತರ ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಅಧಿಕಾರ ಹಂಚಿಕೆ ಸೂತ್ರವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಮಧ್ಯೆ ಕೆಲ ಒಕ್ಕಲಿಗ ನಾಯಕರು ಶಿವಕುಮಾರ್ ಮುಂದಿನ ಸಿಎಂ ಎಂಬ ಪ್ರಚಾರ ಆರಂಭಿಸಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಗೆ ಪೂರ್ಣವಧಿಯ ಅಧ್ಯಕ್ಷರ ಅಗತ್ಯವಿದೆ ಎಂದು ಪ್ರತಿಪಾದಿಸುತ್ತಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ, ಗ್ಯಾರಂಟಿ ರದ್ದು ಕುರಿತು ಯಾರೊಬ್ಬರೂ ಹೇಳಿಕೆ ನೀಡದಂತೆ ಇತ್ತೀಚಿಗೆ ನಡೆದ ಪಕ್ಷದ ಶಾಸಕಾಂಗ ಸಭೆ ನಂತರ ಸತೀಶ್ ಜಾರಕಿಹೊಳಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ.
ಖರ್ಗೆ ಕೂಡಾ ಬೆಳಗಾವಿಯಲ್ಲಿ ನಡೆದ ಗಾಂಧಿ ಭಾರತ್ ಸಮಾವೇಶದಲ್ಲಿ ಸೋನಿಯಾ ಗಾಂಧಿ ಅವರ ತ್ಯಾಗದ ಮಾತುಗಳನ್ನಾಡಿರುವುದು ಕೂಡಾ ಸಿದ್ದರಾಮಯ್ಯ ಪದತ್ಯಾಗ ಮಾಡಿ, ಡಿಕೆ ಶಿವಕುಮಾರ್ ಮುಂದಿನ ಸಿಎಂ ಎಂಬ ಮಾತುಗಳಿಗೆ ಪೂರಕವಾಗಿದೆ ಅನ್ನಿಸುತ್ತಿದೆ.
Advertisement