
ಬಳ್ಳಾರಿ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ತಾರಕಕ್ಕೇರಿದ್ದು, ಪಕ್ಷದ ಆಂತರಿಕ ಘರ್ಷಣೆ ತೀವ್ರವಾಗಿದೆ. ಹಿಂದೆ ಕುಚಿಕು ಗೆಳೆಯರಾಗಿದ್ದ ಮಾಜಿ ಸಚಿವರಾದ ಗಾಲಿ ಜನಾರ್ದನ ರೆಡ್ಡಿ ಹಾಗೂ ಬಿ ಶ್ರೀರಾಮುಲು ಅವರ ನಡುವೆ ವಾಕ್ಸಮರ ಹೆಚ್ಚುತ್ತಿದ್ದಂತೆ ಹೈಕಮಾಂಡ್ ಮಧ್ಯ ಪ್ರವೇಶಿಸಿದೆ.
ಬಳ್ಳಾರಿಯಲ್ಲಿರುವ ಶ್ರೀರಾಮುಲು ಅವರಿಗೆ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೇ ಫೋನ್ ಮಾಡಿ, ಮನವೊಲಿಕೆಗೆ ಯತ್ನಿಸಿದರು. ಈ ವೇಳೆ ರಾಮುಲು ಇತ್ತೀಚಿಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತಮಗಾದ ಅವಮಾನವನ್ನು ವಿವರಿಸಿದರು.
ದೆಹಲಿಗೆ ಬನ್ನಿ ಮಾತನಾಡೋಣ. ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಜೆಪಿ ನಡ್ಡಾ ಅವರು ಶ್ರೀರಾಮುಲು ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕು ಮುನ್ನ ಬಳ್ಳಾರಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಮುಲು, ಸದ್ಯಕ್ಕೆ ನನಗೆ ಪಕ್ಷ ಬಿಡುವ ಯಾವುದೇ ಆಲೋಚನೆ ಇಲ್ಲ. ಬಿಜೆಪಿ ನನಗೆ ತಾಯಿ ಇದ್ದಂತೆ. ದಶಕಗಳವರೆಗೆ ನನಗೆ ಎಲ್ಲವನ್ನು ಕೊಟ್ಟು ಬೆಳೆಸಿದೆ. ಅಷ್ಟು ಬೇಗನೆ ನಾನು ತಾಯಿ - ಮಗನ ಸಂಬಂಧವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದರು.
ಇದೇ ವೇಳೆ ಬಿ. ಶ್ರೀರಾಮುಲು ಅವರನ್ನು ಬೆಳೆಸಿದ್ದೇ ನಾನು ಎಂಬ ರೆಡ್ಡಿ ಹೇಳಿಕೆಗೆ ತಿರುಗೇಟು ಕೊಟ್ಟ ಅವರು, ನಾನು ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. ನನ್ನ ಬೆನ್ನಿಗೆ ಕಾರ್ಯಕರ್ತರ ಪಡೆ ಇದೆ. ಗಾಲಿ ಜನಾರ್ದನ ರೆಡ್ಡಿ ಸುಳ್ಳಿನ ಮೇಲೆ ಕೋಟೆ ಕಟ್ಟಲು ಹೊರಟಿದ್ದಾರೆ. ಇದನ್ನು ನಂಬುವಷ್ಟು ಜನರು ಮೂರ್ಖರಲ್ಲ. ಬಳ್ಳಾರಿಗೆ ಎಲ್ಲವೂ ಗೊತ್ತಿದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಚುನಾವಣೆಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಾಗಿ ರಾಜ್ಯಕ್ಕೆ ಬಂದಿರುವ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರು ಮಂಗಳವಾರ ಸಂಜೆ ಬೆಂಗಳೂರಿನಲ್ಲಿ ಕೋರ್ ಕಮಿಟಿ ಸಭೆ ನಡೆಸಿದ್ದರು.
ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ನೀವು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಶ್ರೀರಾಮುಲು ವಿರುದ್ಧವೇ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಇದರಿಂದ ತೀವ್ರ ಅಸಮಾಧಾನಗೊಂಡ ಶ್ರೀರಾಮುಲು, ಇನ್ನೂ ಕೂಡ ಉಪಚುನಾವಣೆ ಸೋಲಿನ ಕುರಿತ ವರದಿಯನ್ನೇ ಕೊಟ್ಟಿಲ್ಲ. ಸದಾನಂದ ಗೌಡ ಸಮಿತಿ ಉಪ ಚುನಾವಣೆ ಕುರಿತ ವರದಿಯನ್ನೇ ಕೊಟ್ಟಿಲ್ಲ. ಅದಕ್ಕೂ ಮೊದಲು ನೀವು ಹೇಗೆ ಕೆಲಸ ಮಾಡಿಲ್ಲ ಎನ್ನುತ್ತಿರಿ ಎಂದು ಶ್ರೀರಾಮುಲು, ಸಭೆಯಲ್ಲೇ ಪ್ರಶ್ನಿಸಿದ್ದರು.
Advertisement