
ಬೆಂಗಳೂರು: 'ಹೌದು, ನಾನು ಲಕ್ಕಿ, ಅದಕ್ಕೆ ಸಿಎಂ ಆಗಿದ್ದೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
ಸಿದ್ದರಾಮಯ್ಯ ಲಕ್ಕಿ, ಲಾಟರಿ ಹೊಡೆದುಬಿಟ್ಟ, ಅವನ ಗ್ರಹಚಾರ ಚೆನ್ನಾಗಿತ್ತು, ಅದಕ್ಕೆ ಸಿಎಂ ಆಗಿ ಬಿಟ್ಟ ಎಂದು ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಅವರು ಹೇಳಿರುವ ವಿಡಿಯೋವೊಂದು ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.
ಆಳಂದ ಕಾಂಗ್ರೆಸ್ ಶಾಸಕ ಬಿ ಆರ್ ಪಾಟೀಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ಹೌದು, ನಾನು ಅದೃಷ್ಟಶಾಲಿ. ಅದಕ್ಕಾಗಿಯೇ ನಾನು ಮುಖ್ಯಮಂತ್ರಿಯಾದೆ. ನಾನು ಅವರು ಒಟ್ಟಿಗೆ ಶಾಸಕರಾಗಿದ್ದು ಅದಕ್ಕೆ ಹೇಳಿರಬಹುದು. ಅದಕ್ಕೆ ನಾನು ಏನು ಮಾಡಲಿ. ಈ ಬಗ್ಗೆ ಬಿ.ಆರ್.ಪಾಟೀಲ್ ಕರೆಸಿ ಮಾತಾಡುತ್ತೇನೆ" ಎಂದು ಸುದ್ದಿಗಾರರಿಗೆ ತಿಳಿಸಿದರು.
"ಜೆಡಿ(ಎಸ್) ತೊರೆದು ಕಾಂಗ್ರೆಸ್ ಸೇರಿದ ಎಂಟು ಶಾಸಕರಲ್ಲಿ ನಾನೂ ಒಬ್ಬ. ಕೆಲವರು ಶಾಸಕರಾಗಿದ್ದರೆ, ಇನ್ನು ಕೆಲವರು ಸಚಿವರಾಗಿದ್ದಾರೆ. ನಮ್ಮಲ್ಲಿ ಸಿದ್ದರಾಮಯ್ಯ ಅದೃಷ್ಟಶಾಲಿ, ಅವರು ಮುಖ್ಯಮಂತ್ರಿಯಾದರು" ಎಂದು ಪಾಟೀಲ್ ಹೇಳಿದ್ದಾರೆ.
ಬಿಆರ್ ಪಾಟೀಲ್ ಅವರು ಯಾರದ್ದೋ ಜೊತೆ ಫೋನ್ ನಲ್ಲಿ ಮಾತಾಡುವಾಗ ಮೊಬೈಲ್ ನಲ್ಲಿ ವಿಡಿಯೋ ಮಾಡಲಾಗಿದೆ. ಮಂಡ್ಯ ಜಿಲ್ಲೆ K.R.ಪೇಟೆಗೆ ಬಂದಿದ್ದಾಗ ಮಾತಾಡಿದ್ದಾರೆ ಎನ್ನಲಾದ ವಿಡಿಯೋ ಇದಾಗಿದ್ದು, ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಜೊತೆ ಭೇಟಿ ಮಾಡಿಸಿದ್ದೇ ನಾನು. ಸಿದ್ದರಾಮಯ್ಯ ಗ್ರಹಚಾರ ಚೆನ್ನಾಗಿತ್ತು ಆತ ಮುಖ್ಯಮಂತ್ರಿ ಆದ. ನನ್ನ ಗ್ರಹಚಾರ ಚೆನ್ನಾಗಿಲ್ಲ ಎಂದು ಬಿ.ಆರ್.ಪಾಟೀಲ್ ಬೇಸರ ಹೊರಹಾಕಿರುವುದು ಆಡಿಯೋದಲ್ಲಿದೆ.
ಸುರ್ಜೆವಾಲ ಭೇಟಿ ಮಾಡಿ ಎಲ್ಲಾ ವಿಚಾರಗಳನ್ನು ಹೇಳಿದ್ದೇನೆ. ನನ್ನ ಮಾತನ್ನು ಸುರ್ಜೇವಾಲ ಗಂಭೀರವಾಗಿ ಆಲಿಸಿದ್ದಾರೆ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ ನೋಡೋಣ ಎಂದು ಆಪ್ತರೊಬ್ಬರ ಜೊತೆ ಫೋನ್ನಲ್ಲಿ ಬಿಆರ್ ಪಾಟೀಲ್ ಮಾತನಾಡಿರುವುದು ವೈರಲ್ ಆಗಿದ್ದು, ಈ ಮೂಲಕ ಬಿಆರ್ ಪಾಟೀಲ್, ಸಿದ್ದರಾಮಯ್ಯ ವಿರುದ್ಧ ಸುರ್ಜೆವಾಲ ಅವರಿಗೆ ದೂರು ನೀಡಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.
Advertisement