
ಬೆಂಗಳೂರು/ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ತಾವೇ ಸಿಎಂ ಎಂದು ಪ್ರತಿಪಾದಿಸುತ್ತಿದ್ದಂತೆ, ಆ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಅದಕ್ಕೆ ತಮ್ಮ ಅಭ್ಯಂತರವಿಲ್ಲ ಮತ್ತು ಮುಖ್ಯಮಂತ್ರಿಯನ್ನು ಬೆಂಬಲಿಸುವುದಾಗಿ ಬುಧವಾರ ಹೇಳಿದ್ದಾರೆ.
ಐದು ವರ್ಷ ನಾನೇ ಮುಖ್ಯಮಂತ್ರಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆ ಶಿವಕುಮಾರ್ ಅವರು, ನನಗೆ ಬೇರೆ ದಾರಿ ಇಲ್ಲ. ನಾನು ಬೆಂಬಲ ನೀಡಲೇಬೇಕು ಮತ್ತು ಕಾಂಗ್ರೆಸ್ ಹೈಕಮಾಂಡ್‌ನ ನಿರ್ದೇಶನಗಳನ್ನು ಪಾಲಿಸುವುದಾಗಿ ಹೇಳಿದರು.
ಇಂದು ನಂದಿ ಬೆಟ್ಟದಲ್ಲಿ ನಡೆಯುತ್ತಿರುವ ಸಚಿವ ಸಂಪುಟ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಆಗಮಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರು, "ನನಗೆ ಯಾವ ಆಯ್ಕೆ ಇದೆ? ಬೇರೆ ಮಾರ್ಗ ಇಲ್ಲ. ನಾನು ಅವರ(ಸಿದ್ದರಾಮಯ್ಯ) ಬೆನ್ನಿಗೆ ನಿಂತು ಬೆಂಬಲಿಸುತ್ತೇನೆ. ಅವರು ಸಿಎಂ ಆಗಿ ಮುಂದುವರೆಯುವುದಕ್ಕೆ ನನಗೆ ಯಾವುದೇ ಆಕ್ಷೇಪವಿಲ್ಲ. ಪಕ್ಷದ ಹೈಕಮಾಂಡ್ ಏನು ಹೇಳುತ್ತದೆ ಅದನ್ನು ಮಾಡುತ್ತೇನೆ" ಎಂದು ಸುದ್ದಿಗಾರರಿಗೆ ತಿಳಿಸಿದರು.
ನೀವು ಪಕ್ಷ ಕಟ್ಟಲು ಕಷ್ಟಪಟ್ಟಿದ್ದೀರಿ ಆ ಕಾರಣಕ್ಕೆ ನಿಮ್ಮ ಬೆಂಬಲಿಗರು ಸಿಎಂ ಸ್ಥಾನಕ್ಕೆ ನಿಮ್ಮ ಹೆಸರು ಪ್ರಸ್ತಾಪಿಸುತ್ತಿದ್ದಾರೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, "ನಾನೊಬ್ಬನೆ ಪಕ್ಷ ಕಟ್ಟಿದ್ದೇನೆಯೇ? ನನ್ನಂತೆ ನೂರಾರು, ಸಾವಿರಾರು ಲಕ್ಷಾಂತರ ಜನ ಪಕ್ಷ ಕಟ್ಟಿದ್ದಾರೆ. ಮೊದಲು ಅವರ ನಂಬಿಕೆ ಉಳಿಸಿಕೊಳ್ಳೋಣ" ಎಂದು ಹೇಳಿದರು.
ಪಕ್ಷದ ಶಿಸ್ತು ಮುಖ್ಯ ಎಂದು ಸ್ಪಷ್ಟಪಡಿಸಿದ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್, ತಮ್ಮನ್ನು ಸಿಎಂ ಮಾಡುವಂತೆ ನಾನು ಯಾರನ್ನೂ ಕೇಳಿಲ್ಲ ಮತ್ತು ನಾಯಕತ್ವ ಬದಲಾವಣೆಯ ವಿಷಯದ ಬಗ್ಗೆ ಸಾರ್ವಜನಿಕ ಹೇಳಿಕೆ ನೀಡುವ ನಾಯಕರಿಗೆ ನೋಟಿಸ್ ನೀಡಲಾಗುವುದು ಎಂದು ಎಚ್ಚರಿಸಿದರು.
ಶಿವಕುಮಾರ್ ಅವರನ್ನು ಸಿಎಂ ಮಾಡಬೇಕು ಎಂದು ಮಂಗಳವಾರ ಹೇಳಿಕೆ ನೀಡಿದ ರಾಮನಗರ ಕಾಂಗ್ರೆಸ್ ಶಾಸಕ ಎಚ್‌ಎ ಇಕ್ಬಾಲ್ ಹುಸೇನ್ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
"ನಾನು ಅವರಿಗೆ ನೋಟಿಸ್ ನೀಡಿದ್ದೇನೆ. ಇತರರಿಗೂ ನೋಟಿಸ್ ನೀಡಬೇಕಾಗುತ್ತದೆ. ಶಿಸ್ತು ಮುಖ್ಯ. ಸಿಎಂ ಹುದ್ದೆಗೆ ನನ್ನ ಹೆಸರು ಹೇಳುವಂತೆ ನಾನು ಯಾರನ್ನೂ ಕೇಳಿಲ್ಲ. ಅದರ ಅಗತ್ಯ ನನಗೆ ಇಲ್ಲ. ಸಿಎಂ(ಸಿದ್ದರಾಮಯ್ಯ) ಇರುವಾಗ, ಯಾವುದೇ ಭಿನ್ನಾಭಿಪ್ರಾಯದ ಅಗತ್ಯವಿಲ್ಲ" ಎಂದು ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
Advertisement