
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಪಕ್ಷದ ಶಾಸಕರ ವಿಶ್ವಾಸ ಕಳೆದುಕೊಂಡಿದ್ದಾರೆ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸರ್ಕಾರ ಬದಲಾವಣೆಗೆ ವೇದಿಕೆ ಸಿದ್ಧಪಡಿಸಲು ಬೆಂಗಳೂರಿನಲ್ಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ಮುಖಂಡರು, ಕಾಂಗ್ರೆಸ್‌ನೊಳಗಿನ ಪ್ರಸ್ತುತ ಬೆಳವಣಿಗೆಗಳು ಮತ್ತು ಸಿಎಂ ಹುದ್ದೆಯ ಸ್ಪರ್ಧೆಯು ಕುದುರೆ ವ್ಯಾಪಾರಕ್ಕೆ ಕಾರಣವಾಗಬಹುದು ಎಂದು ಹೇಳಿದರು. ಪರಿಸ್ಥಿತಿಯನ್ನು ಗಮನಿಸುವಂತೆ ಅವರು ರಾಜ್ಯಪಾಲರನ್ನು ಒತ್ತಾಯಿಸಿದರು. ರಾಜ್ಯದಲ್ಲಿ ಪರಿಸ್ಥಿತಿ ವೇಗವಾಗಿ ಹದಗೆಡುತ್ತಿದೆ, ಆಡಳಿತ ಯಂತ್ರ ಕುಸಿದಿದೆ, ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ಶಾಸಕರಲ್ಲಿ ಆಂತರಿಕ ಸ್ಪರ್ಧೆ ಬೆಳೆಯುತ್ತಿದೆ ಎಂದು ವಿಜಯೇಂದ್ರ ಟೀಕಿಸಿದರು.
ಅಕ್ಟೋಬರ್ ಅಥವಾ ನವೆಂಬರ್‍ನಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ. ಹೀಗಾಗಿಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮನೆಯೊಂದು ಮೂರು ಬಾಗಿಲು ಆಗಿದ್ದು, ಎಲ್ಲರೂ ಸಿಎಂ ಆಗಲು ಮುಂದಾಗಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು. ಸಿದ್ದರಾಮಯ್ಯನವರು ಸಿಎಂ ಆಗಿಯೇ ಇರುತ್ತಾರೆಂದು ಪಕ್ಷದ ವರಿಷ್ಠರು ಹೇಳಬೇಕು. ಆದರೆ, ಭಯದಿಂದ ಸ್ವತಃ ಸಿದ್ದರಾಮಯ್ಯರೇ ಅದನ್ನು ಪದೇ ಪದೆ ಹೇಳುತ್ತಿದ್ದಾರೆ. ಅಧಿಕಾರವನ್ನು ಒದ್ದು ಕಿತ್ತುಕೊಳ್ಳುತ್ತೇನೆ ಎನ್ನುವ ಡಿಕೆಶಿ ಈ ರೀತಿಯ ಸಂದೇಶ ನೀಡುತ್ತಿದ್ದಾರೆ. ಸರಕಾರದಲ್ಲಿ ಹಣವಿಲ್ಲದೆ, ಅಭಿವೃದ್ಧಿ ಶೂನ್ಯವಾಗಿ ಶಾಸಕರು ಬೇಸರಗೊಂಡಿದ್ದಾರೆ ಎಂದರು.
2028ರ ವರೆಗೆ ಸಿದ್ದರಾಮಯ್ಯನವರೇ ಸಿಎಂ ಎಂದು ಡಿ.ಕೆ.ಶಿವಕುಮಾರ್ ಹೇಳಲಿ. ಅದನ್ನು ಆರನೇ ಗ್ಯಾರಂಟಿ ಎಂದು ಅಂದುಕೊಂಡು ಸುಮ್ಮನಾಗುತ್ತೇವೆ ಎಂದ ಅಶೋಕ್, ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು ಸೂಕ್ತವಲ್ಲ. ಜಿಲ್ಲೆಗಳ ಹೆಸರನ್ನು ಬದಲಿಸಿದಂತೆಯೇ ಏಕಾಏಕಿ ಹೆಸರು ಬದಲಿಸುತ್ತಿದ್ದಾರೆ. ಪೂರ್ವಿಕರು ಇಟ್ಟ ಹೆಸರನ್ನು ಹೀಗೆ ಬದಲಿಸಬಾರದು ಎಂದು ಆಗ್ರಹಿಸಿದರು.
ಬೆಂಗಳೂರನ್ನು ಈಗಾಗಲೇ ಒಡೆದುಹಾಕಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಬೆಂಗಳೂರನ್ನು ಒಂದಾಗಿಸಲಿದೆ. ಬೆಂಗಳೂರು ಅಭಿವೃದ್ಧಿ ಮಾಡುವುದು ಬಿಟ್ಟು, ನಾಮಫಲಕ ಬದಲಿಸುವುದರಿಂದ ಕೋಟ್ಯಂತರ ರೂಪಾಯಿ ವ್ಯರ್ಥವಾಗಲಿದೆ. ದಕ್ಷಿಣ, ಉತ್ತರ ಎಂದು ಹೆಸರು ನೀಡುವುದರಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ವಾಲ್ಮೀಕಿ ನಿಗಮದ ಹಗರಣವನ್ನು ಸಿಬಿಐಗೆ ನೀಡಿರುವುದರಿಂದ ಬಿಜೆಪಿಯ ಹೋರಾಟಕ್ಕೆ ಜಯ ಸಿಕ್ಕಿದೆ. ಕೋರ್ಟ್ ನಮಗೆ ನಿಜವಾದ ನ್ಯಾಯ ನೀಡಿದೆ ಎಂದ ಅವರು, ಆರೆಸ್ಸೆಸ್ ನಿಷೇಧ ಮಾಡಿದರೆ, ಮತ್ತೆ ಸಂಘಟನೆ ಪುಟಿದೇಳುತ್ತದೆ. ನಾನು, ಪ್ರಧಾನಿ ಮೋದಿ, ಅನೇಕ ರಾಜ್ಯಗಳ ರಾಜ್ಯಪಾಲರು, ಹಲವಾರು ಸಂಸದರು, ಶಾಸಕರು ಆರೆಸ್ಸೆಸ್‍ನಲ್ಲಿದ್ದಾರೆ ಎಂದರು.
ತನಿಖೆಯ ಸಮಯದಲ್ಲಿ ಹಲವಾರು ದೊಡ್ಡ ಹೆಸರುಗಳು ಹೊರಬರುತ್ತವೆ ಎಂದು ವಿಜಯೇಂದ್ರ ಹೇಳಿದರು. ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಉನ್ನತಿಗಾಗಿ ಮೀಸಲಾದ 187 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಹಣವನ್ನು ಬಾರ್‌ಗಳು, ಆಭರಣ ಅಂಗಡಿಗಳಲ್ಲಿ ಮತ್ತು ಲೋಕಸಭಾ ಚುನಾವಣೆಯ ಸಮಯದಲ್ಲಿಯೂ ಖರ್ಚು ಮಾಡಲಾಗಿದೆ ಎಂದು ಅವರು ಹೇಳಿದರು.
Advertisement