
ಬೆಂಗಳೂರು: ಡಿ.ಕೆ.ಸುರೇಶ್ ಇಡಿ ತನಿಖೆಗೆ ಸಹಕಾರ ನೀಡಲಿದ್ದಾರೆ ಹಾಗೂ ತಮ್ಮ ಹೇಳಿಕೆಯನ್ನು ಸಲ್ಲಿಸಲಿದ್ದಾರೆ. ನಮ್ಮ ಹೆಸರನ್ನು ಅಪರಿಚಿತರು ದುರುಪಯೋಗ ಮಾಡಿಕೊಳ್ಳುತ್ತಾ ಇದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದರು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಅರಮನೆ ಮೈದಾನದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಮಂಗಳವಾರ ಪ್ರತಿಕ್ರಿಯೆ ನೀಡಿದರು. ಐಶ್ವರ್ಯಾ ಗೌಡ ಅವರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಕೆ. ಸುರೇಶ್ ಅವರಿಗೆ ಇಡಿ ಸಮನ್ಸ್ ನೀಡಿರುವ ಬಗ್ಗೆ ಕೇಳಿದಾಗ, “ಶಿವಕುಮಾರ್ ತಂಗಿ ಎಂದೇಳಿಕೊಂಡು ಮೋಸ ಮಾಡಿರುವ ಬಗ್ಗೆ ವಂಚನೆಗೆ ಒಳಗಾಗಿರುವ ಮೂರು ನಾಲ್ಕು ಜನರು ನನ್ನ ಬಳಿ ಬಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಎಂದು ನಾವೂ ಸಹ ಹೇಳಿದ್ದೇವೆ. ಆದ ಕಾರಣ ನಾವು ಇಡಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ” ಎಂದು ಹೇಳಿದರು.
ಸುರೇಶ್ ಅವರು ವಿಚಾರಣೆಗೆ ಹಾಜರಾಗುತ್ತಾರೆಯೇ ಎಂದು ಕೇಳಿದಾಗ, “ಈ ದೇಶದ ಕಾನೂನಿಗೆ, ವಿಚಾರಣೆಗಳಿಗೆ ನಾವು ಗೌರವ ನೀಡುತ್ತೇವೆ. ಮೋಸ ಮಾಡುವ ವ್ಯಕ್ತಿಗಳ ವಿರುದ್ಧದ ತನಿಖೆಗೆ ನಾವು ಸಹಕಾರ ನೀಡಲು ಬದ್ದರಾಗಿದ್ದೇವೆ. ಜನರಿಗೆ ನ್ಯಾಯ ಒದಗಿಸಿಕೊಡುವ ಕೆಲಸವನ್ನು ಡಿ.ಕೆ.ಸುರೇಶ್ ಹಾಗೂ ಶಿವಕುಮಾರ್ ಮಾಡುತ್ತಾರೆ” ಎಂದರು. “ಸಹೋದರ ಡಿ.ಕೆ.ಸುರೇಶ್ ಅವರ ಮನೆ ಬಾಗಿಲಿಗೆ ಇಡಿಯವರು ಸಮನ್ಸ್ ಅನ್ನು ಅಂಟಿಸಿ ಹೋಗುತ್ತೇವೆ ಎಂದರಂತೆ. ಅದಕ್ಕೆ ನಾನು ಸ್ವೀಕರಿಸಿ ಎಂದು ಹೇಳಿದ್ದೇನೆ. ಸಮನ್ಸ್ ನೀಡಲು ಬಂದಾಗ ಸಹೋದರ ಮನೆಯಲ್ಲಿ ಇರಲಿಲ್ಲ” ಎಂದು ತಿಳಿಸಿದರು.
ಕುಮಾರಸ್ವಾಮಿಗೆ ಅಂಗಿ, ಪಂಚೆ, ಜುಬ್ಬಾ ಕಳುಹಿಸೋಣ
ರಾಜ್ಯದಲ್ಲಿ ಮುಂದೆ ಬಿಜೆಪಿ- ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಅವರಿಗೆ ಯಾವ ರೀತಿಯ ಪಂಚೆ, ಅಂಗಿ, ಜುಬ್ಬಾ, ಪ್ಯಾಂಟ್, ಮೇಲಂಗಿ ಬೇಕು ಎಂಬುದನ್ನು ಕಳುಹಿಸಿ ಕೊಡೋಣ. ಮಾಧ್ಯಮದವರ ಕೈಗೆ ಇವೆಲ್ಲವನ್ನು ನೀಡುತ್ತೇನೆ. ನೀವೇ ಅವರಿಗೆ ತಲುಪಿಸಿಬಿಡಿ” ಎಂದು ಕುಹಕವಾಡಿದರು.
Advertisement