
ಬೆಂಗಳೂರು: ಬೋಸ್ಟನ್, ಸ್ಯಾನ್‌ಫ್ರಾನ್ಸಿಸ್ಕೋ ನಗರಗಳಲ್ಲಿ ಆಯೋಜನೆಗೊಂಡಿದ್ದ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ವಿದೇಶಕ್ಕೆ ತೆರಳಿದ್ದ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಅಮೆರಿಕಗೆ ಕ್ಲಿಯರೆನ್ಸ್ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನಾವು ಆಟ ಆಡಲು ವಿದೇಶಗಳಿಗೆ ಹೋಗುತ್ತಿಲ್ಲ. ಜನರಿಗೆ ಉದ್ಯೋಗ ಸೃಷ್ಟಿ ಮಾಡುವುದು ನಮ್ಮ ಕರ್ತವ್ಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಪ್ಯಾರಿಸ್ ಪ್ರವಾಸದಿಂದ ಬುಧವಾರ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಅಮೆರಿಕ ಪ್ರವಾಸಕ್ಕೆ ನಿರ್ಬಂಧ ಹೇರಿದ್ದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರಾಜ್ಯಕ್ಕೆ ಬಂಡವಾಳ ತರುವುದು ಕೂಡ ನಮ್ಮ ಕರ್ತವ್ಯವಾಗಿದೆ. ಕರ್ನಾಟಕಕ್ಕೆ ಒಳ್ಳೆಯದಾದರೆ ನಮ್ಮ ದೇಶಕ್ಕೆ ತಾನೇ ಒಳ್ಳೆಯದು. ಕರ್ನಾಟಕವು ದೇಶದ ಆರ್ಥಿಕತೆಯ ಎಂಜಿನ್ ಇದ್ದಂತೆ ಎಂದರು.
ಇದರ ಜೊತೆಗೆ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ಹಾಗೂ ಮೈಸೂರಿನಂತೆ ಕಲ್ಯಾಣ ಕರ್ನಾಟಕವೂ ಅಭಿವೃದ್ಧಿ ಆಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರುವುದು ಬಿಜೆಪಿ - ಮಲ್ಲಿಕಾರ್ಜುನ ಖರ್ಗೆ ಅವರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ರಾಜಕೀಯ ಪಕ್ಷವೊಂದರ ಸೋಷಿಯಲ್ ಮೀಡಿಯಾ ಖಾತೆ ವಾಟ್ಸಾಪ್ ವಿಶ್ವವಿದ್ಯಾಲಯದ ಪಠ್ಯಕ್ರಮವನ್ನು ಮೀರಿದೆ ಎಂದು ಬಿಜೆಪಿ ಟ್ವೀಟ್ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕಲ್ಯಾಣ ಕರ್ನಾಟಕ ಪ್ರದೇಶ ಎದುರಿಸುತ್ತಿರುವ ಹಾಗೂ ಇತಿಹಾಸದ ಅನ್ಯಾಯಗಳನ್ನು ಗ್ರಹಿಸಲು ವಿಫಲರಾಗಿದ್ದಾರೆ. ಎಲ್.ಕೆ. ಅಡ್ವಾಣಿ ಉಪಪ್ರಧಾನಿಯಾಗಿದ್ದಾಗ, ಹೈದರಾಬಾದ್ - ಕರ್ನಾಟಕ ಪ್ರದೇಶಕ್ಕೆ ವಿಶೇಷ ಮೀಸಲಾತಿ ಬೇಡಿಕೆಯನ್ನು ಅವರು ಸ್ಪಷ್ಟವಾಗಿ ನಿರಾಕರಿಸಿದರು ಎಂಬುದು ಆಶ್ಚರ್ಯವೇನಿಲ್ಲ. ಬಿಜೆಪಿ 371(ಜೆ) ವಿಧಿಯ ಉದ್ದೇಶ ಮತ್ತು ಸಾಂವಿಧಾನಿಕ ಚೌಕಟ್ಟನ್ನು ಅರ್ಥಮಾಡಿಕೊಳ್ಳುತ್ತದೆಯೇ? ಅಥವಾ "ವಿಶೇಷ ಸ್ಥಾನಮಾನ" ನೀಡುವುದರ ಹಿಂದಿನ ತಾರ್ಕಿಕತೆಯನ್ನು ಅರ್ಥ ಮಾಡಿಕೊಳ್ಳುತ್ತದೆಯೇ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ನೀವು ದಾಟುವ ಅಣೆಕಟ್ಟುಗಳು, ನೀವು ಓಡಿಸುವ ರಸ್ತೆಗಳು, ನೀವು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗಳು, ನೀವು ಬಳಸುವ ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳು, ನಿಮ್ಮ ಮಕ್ಕಳು ವ್ಯಾಸಂಗ ಮಾಡುವ ಶಾಲೆಗಳು ಮತ್ತು ಕಾಲೇಜುಗಳು ಇವೆಲ್ಲವೂ ಕಾಂಗ್ರೆಸ್ ಸರ್ಕಾರದ ಕೊಡುಗೆಯಾಗಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ರಾಯಚೂರಿನಲ್ಲಿ AIIMS ಅನ್ನು ಸ್ಥಾಪಿಸುವಲ್ಲಿ ಬಿಜೆಪಿ ಪದೇ ಪದೇ ವಿಫಲವಾಗಿದ್ದರೂ, ಕಲಬುರಗಿಗೆ ESIC, GIMS, ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳನ್ನು ಈ ಭಾಗಕ್ಕೆ ನೀಡಿದ್ದು ಮತ್ತದೆ ಕಾಂಗ್ರೆಸ್. ಬಿಜೆಪಿ ವಿರೋಧಿಸಿದ 371(ಜೆ) ಮೀಸಲಾತಿ ಜಾತಿ ಅಥವಾ ಧರ್ಮವನ್ನು ಆಧರಿತವಲ್ಲ; ಇದು ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸುವ ಆಧಾರದ ಮೇಲೆ ರೂಪುಗೊಂಡಿದೆ.
ಮಲ್ಲಿಕಾರ್ಜುನ ಖರ್ಗೆ ಅವರು ಈ ಪ್ರದೇಶಕ್ಕೆ ಏನನ್ನೂ ಮಾಡಿಲ್ಲ ಎಂದು ಬಿಜೆಪಿ ನಂಬಿದರೆ, ಅವರ ಪಕ್ಷದ ಸದಸ್ಯರು ಮತ್ತು ಅವರ ಕುಟುಂಬಗಳು 371(ಜೆ) ವಿಧಿಯ ಅಡಿಯಲ್ಲಿ ನೀಡಲಾದ ಪ್ರತಿಯೊಂದು ಪ್ರಯೋಜನವನ್ನು ತಿರಸ್ಕರಿಸುವುದಾಗಿ ಸಾರ್ವಜನಿಕವಾಗಿ ಘೋಷಿಸಲಿ. ಆದರೆ, ಈ ಅಭಿವೃದ್ಧಿಯ ಬೀಜವನ್ನು ಯಾರು ಬಿತ್ತಿದರು ಎಂಬುದರ ಬಗ್ಗೆ ಅಜ್ಞಾನದಿಂದ ವರ್ತಿಸುತ್ತಲ್ಲೇ ಸೌಲಭ್ಯಗಳನ್ನು ಅನುಭವಿಸುತ್ತಲೇ ಇದ್ದಾರೆ ಎಂದು ಅವರು ಅಕ್ರೋಶ ವ್ಯಕ್ತಪಡಿದ್ದಾರೆ.
Advertisement