
ಬೆಳಗಾವಿ: ಆಡಳಿತಾರೂಢ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆಳುತ್ತಿರುವಂತೆಯೇ ರಾಜು ಕಾಗೆ ಸೇರಿದಂತೆ ಹಲವು ಶಾಸಕರು ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ ಎಂದು ಸಂಸದ ಜಗದೀಶ್ ಶೆಟ್ಟರ್ ಸೋಮವಾರ ಹೇಳಿದರು.
ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಆಂತರಿಕ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಸರ್ಕಾರ ಪತನವಾಗುವ ಕಾಲ ಸನ್ನಿಹಿತವಾಗುತ್ತಿದೆ ಎಂದರು.
ಸಿಎಂ ಬದಲಾವಣೆ ಆಗ್ತಾರೆ ಎಂಬುದು ಗೊತ್ತಿಲ್ಲ. ಆದರೆ ಸರ್ಕಾರ ಮಾತ್ರ ಬಹಳ ದಿನ ಇರಲ್ಲ. ನಾವು ಆಪರೇಷನ್ ಕಮಲ ಮಾಡಲ್ಲ. ಆದರೆ ಹತಾಶ ಕಾಂಗ್ರೆಸ್ ಶಾಸಕರು ತಾವಾಗಿಯೇ ಬಿಜೆಪಿ ಸೇರಲಿದ್ದಾರೆ. ನಾವು ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ. ಅವರೇ ಬರ್ತಾರೆ ಇದಕ್ಕೆ ಆಪರೇಷನ್ ಕಮಲ ಅಂತಾರೆ ಎಂದು ಹೇಳಿದರು.
ಹಿರಿಯ ಶಾಸಕರು ಬಹಿರಂಗವಾಗಿಯೇ ಸಿಡಿದೇಳುವುದರೊಂದಿಗೆ ಕಾಂಗ್ರೆಸ್ ನಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ. ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಸರ್ಕಾರದಲ್ಲಿ ಯಾವುದೇ ಕೆಲಸ ಆಗ್ತಿಲ್ಲ. ಸರ್ಕಾರ ದೀವಾಳಿ ಆಗಿದೆ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದೆ. ಯಾವ ಕೆಲಸ ಆಗ್ತಿಲ್ಲ ಅಂತಾ ಆಡಳಿತ ಪಕ್ಷದವರು ಹೇಳ್ತಿದ್ದಾರೆ ಎಂದರು.
ಮೂಗಿಗೆ ತುಪ್ಪು ಒರೆಸುವ ಕೆಲಸ ಸಿದ್ದರಾಮಯ್ಯ ಮಾಡ್ತಿದ್ದಾರೆ. ಟೆಂಡರ್ ಮಾಡೋದು ವರ್ಕ್ ಆರ್ಡರ್ ಕೊಡುವುದಿಲ್ಲ. ರಾಜು ಕಾಗೆ, ಬಿಆರ್ ಪಾಟೀಲ್ ಹೇಳಿಕೆ ಸರಿ ಇದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಶೆಟ್ಟರ್ ಒತ್ತಾಯಿಸಿದರು.
Advertisement