ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ನಾನು ಸತ್ಯಹರಿಶ್ಚಂದ್ರ ಅಲ್ಲ, ಆದ್ರೆ ಬಡವರಿಂದ ಹಣ ಪಡೆಯುವಷ್ಟು ದರಿದ್ರ ಬಂದಿಲ್ಲ!

ಹಣ ಪಡೆದು ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಆರೋಪಿಸಿದ್ದು, ಇದಕ್ಕೆ ವಸತಿ ಸಚಿವರು ಇಂದು ಸ್ಪಷ್ಟನೆ ನೀಡಿದ್ದಾರೆ.
Zameer Ahmed Khan
ಜಮೀರ್ ಅಹ್ಮದ್ ಖಾನ್
Updated on

ಬೆಂಗಳೂರು: ಆರ್ಥಿಕವಾಗಿ ದುರ್ಬಲ ವರ್ಗದ(ಇಡಬ್ಲ್ಯೂಎಸ್) ಯೋಜನೆಯಡಿ ಮನೆ ಹಂಚಿಕೆಯಲ್ಲಿ ಭ್ರಷ್ಟಾಚಾರದ ಆರೋಪಗಳನ್ನು ಮಂಗಳವಾರ ಸ್ಪಷ್ಟವಾಗಿ ತಳ್ಳಿಹಾಕಿದ ವಸತಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಅವರು, ಈ ಕುರಿತು ಸಮಗ್ರ ತನಿಖೆ ನಡೆಸಲಿ ಎಂದಿದ್ದಾರೆ.

ಹಣ ಪಡೆದು ಮನೆ ಹಂಚಿಕೆ ಮಾಡಲಾಗುತ್ತಿದೆ ಎಂದು ಆಡಳಿತಾರೂಢ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು ಆರೋಪಿಸಿದ್ದು, ಇದಕ್ಕೆ ವಸತಿ ಸಚಿವರು ಇಂದು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

"ಮನೆ ಹಂಚಿಕೆ ಮಾಡಲು ಹಣ ತೆಗೆದುಕೊಳ್ಳುತ್ತಿರುವ ಬಗ್ಗೆ ಯಾವುದಾದರೂ ದಾಖಲೆ ಇದೆಯೇ? ಹಣಕ್ಕೆ ಬೇಡಿಕೆ ಇಟ್ಟವರು ಯಾರು ಎಂದು ಬಿ.ಆರ್. ಪಾಟೀಲ್ ನನಗೆ ಹೇಳಲಿ. ಲಂಚ ಪಡೆದವರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ. ಅವರನ್ನು ಬಿಡುವುದಿಲ್ಲ" ಎಂದು ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ಬಿಆರ್ ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಇನ್ನು ತಾವು ಈಗಾಗಲೇ ಇಲಾಖಾ ತನಿಖೆಗೆ ಆದೇಶಿಸಿರುವುದಾಗಿ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

"ಸಚಿವನಾಗಿ, ಅಂತಹ ಘಟನೆಗಳು ನಡೆದಿವೆಯೇ ಎಂದು ತನಿಖೆ ನಡೆಸಲು ನಾನು ಹಿರಿಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದೇನೆ. ಇಲ್ಲಿಯವರೆಗೆ, ಅಂತಹ ಯಾವುದೇ ನಿದರ್ಶನ ನನ್ನ ಗಮನಕ್ಕೆ ಬಂದಿಲ್ಲ" ಎಂದು ಅವರು ತಿಳಿಸಿದ್ದಾರೆ.

Zameer Ahmed Khan
ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ನಿಜವನ್ನೇ ಹೇಳಿದ್ದೇನೆ, ಹಿಂದೆ ಸರಿಯಲ್ಲ; ಬಿ.ಆರ್ ಪಾಟೀಲ್

ತಾವು ವೈಯಕ್ತಿಕವಾಗಿ ಲಾಭ ಪಡೆದಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ ಖಾನ್, "ನಾನು ಬಡವರಿಂದ ಹಣ ಪಡೆಯುವಷ್ಟು ದರಿದ್ರ ನನಗೆ ಬಂದಿಲ್ಲ, ನಾನು ಸತ್ಯಹರಿಶ್ಚಂದ್ರ ಎಂದು ಹೇಳಿಕೊಳ್ತಿಲ್ಲ. ಆದ್ರೆ ಈ ಬಡವರ ಮನೆ ವಿಚಾರದಲ್ಲಿ ನಾನು ಹಣ ಪಡೆದ್ರೆ ನನ್ನ ಮಕ್ಕಳಿಗೆ ಶಾಪ ತಟ್ಟಲಿ ಎಂದು ಜಮೀರ್ ಅಹ್ಮದ್ ಕಿಡಿಕಾರಿದರು.

ಫಲಾನುಭವಿಗಳನ್ನು ಆಯ್ಕೆ ಮಾಡಲು ಶಾಸಕರಿಗಲ್ಲ, ಪಂಚಾಯತ್‌ಗಳಿಗೆ ಮಾತ್ರ ಅಧಿಕಾರವಿದೆ. ಪಂಚಾಯತ್ ಸದಸ್ಯರು ಹಣ ತೆಗೆದುಕೊಂಡಿದ್ದರೆ, ಅದನ್ನು ಬಹಿರಂಗಪಡಿಸಲಿ. ಪಂಚಾಯತ್ ಅಧಿಕಾರಿಗಳು ಫಲಾನುಭವಿಗಳಿಂದ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಯಾವುದೇ ದೂರು ನನಗೆ ಬಂದಿಲ್ಲ" ಎಂದರು.

"ನಾವು ಹಂತ ಹಂತವಾಗಿ ಮನೆಗಳನ್ನು ಹಂಚಿಕೆ ಮಾಡುತ್ತಿದ್ದೇವೆ. ಪಾಟೀಲ್ ಅವರು ಸುಮಾರು 2,000 ಮನೆಗಳನ್ನು ಕೇಳಿದ್ದರು. ಆದರೆ ನಾವು ಮೊದಲು ರದ್ದುಗೊಂಡ ಮನೆಗಳನ್ನು ಮರುಹಂಚಿಕೆ ಮಾಡಬೇಕಾಗಿದೆ. ನಾವು ಪ್ರತ್ಯೇಕ ಪಂಚಾಯತ್‌ಗಳಿಗೆ 950 ಮನೆಗಳನ್ನು ನೀಡಿದ್ದೇವೆ. ಆಳಂದ್ ಪಂಚಾಯತ್ ಅಧ್ಯಕ್ಷರು ತಮ್ಮ ಜನರಿಗೆ 950 ಮನೆಗಳನ್ನು ಒದಗಿಸಿದ್ದಾರೆ. ಆದರೆ ತಾವು ಶಿಫಾರಸು ಮಾಡಿದ ಯಾರಿಗೂ ಮನೆ ಹಂಚಿಕೆಯಾಗಿಲ್ಲ ಎಂಬ ಪಾಟೀಲ್ ಅವರ ದೂರನ್ನು ಉಲ್ಲೇಖಿಸಿದ ಖಾನ್, ಆಯ್ಕೆಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಪುನರುಚ್ಚರಿಸಿದರು.

ವಸತಿ ನಿಗಮದಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ಬಿಜೆಪಿಯವರು ಒಂದು ಮನೆಯನ್ನಾದರೂ ಬಡವರಿಗೆ ಕೊಟ್ಟಿದ್ದಾರೆಯೇ? ಕೊಟ್ಟಿದ್ದಾರೆಂದು ಅವರು ಸಾಬೀತು ಮಾಡಲಿ, ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದರು.

ನಾನು ಅಧಿಕಾರಕ್ಕೆ ಬಂದ ಮೇಲೆ ಬಡವರಿಗೆ ಮನೆಗಳನ್ನು ಹಂಚಿಕೆ ಮಾಡುತ್ತಿದ್ದೇನೆ. ಆದರೆ, ಇವತ್ತು ಬಿಜೆಪಿಯವರು ಬಡವರ ಬಗ್ಗೆ ಮಾತನಾಡುತ್ತಿದ್ದಾರೆ. ಬಡವರ ಮೇಲೆ ಅವರಿಗೆ ಯಾವುದೇ ಕಾಳಜಿ ಇಲ್ಲ. ತಮ್ಮ ಇಲಾಖೆಯ ಮೇಲಿನ ಆರೋಪಗಳ ಬಗ್ಗೆ ಯಾವುದೇ ತನಿಖೆ ನಡೆಸಲಿ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com