
ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಸಾಕಷ್ಟು ಶಕ್ತಿ ಕೇಂದ್ರಗಳಿದ್ದು, ಸೆಪ್ಟೆಂಬರ್ ನಂತರ ರಾಜಕೀಯ ಬೆಳವಣಿಗೆಗಳು ನಡೆಯಲಿವೆ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ಗುರುವಾರ ಹೇಳಿದ್ದಾರೆ.
ಈ ವರ್ಷದ ಕೊನೆಯಲ್ಲಿ ರಾಜ್ಯದಲ್ಲಿ ಸಚಿವ ಸಂಪುಟ ಪುನಾರಚನೆ ಮತ್ತು ನಾಯಕತ್ವ ಬದಲಾವಣೆ ಆಗಲಿದೆ ಎಂಬ ಊಹಾಪೋಹಗಳ ನಡುವೆ ರಾಜಣ್ಣ ನೀಡಿರುವ ಹೇಳಿಕೆ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೆಪ್ಟೆಂಬರ್ ಮುಗಿಯಲಿ. ರಾಜ್ಯ ರಾಜಕೀಯದಲ್ಲಿ ಬೆಳವಣಿಗೆಗಳಾಗುತ್ತವೆ. ಸೆಪ್ಟೆಂಬರ್ ನಂತರ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2013-18ರಲ್ಲಿ (ಮೊದಲ ಸಿಎಂ ಅವಧಿ) ಇದ್ದಂತೆ ಇಲ್ಲ ಎಂಬ ಕೆಲವು ಶಾಸಕರ ಅಭಿಪ್ರಾಯದ ಹಿನ್ನೆಲೆಯಲ್ಲಿ ಅವರ ಮೇಲೆ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, 2013-18ರ ಅವಧಿಯಲ್ಲಿ ಕೇವಲ ಒಂದು ಶಕ್ತಿ ಕೇಂದ್ರವಿತ್ತು. ಈಗ ಒಂದು, ಎರಡು, ಮೂರು, ಎಷ್ಟು ಬೇಕೋ ಅಷ್ಟು ಶಕ್ತಿ ಕೇಂದ್ರಗಳಿವೆ ಎಂದರು.
ಈಗ ಹಲವು ಅಧಿಕಾರ ಕೇಂದ್ರಗಳಿರುವಾಗ ಗದ್ದಲ ಹೆಚ್ಚುತ್ತದೆ, ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಪರಿಸ್ಥಿತಿಗೆ ತಕ್ಕಂತೆ ಸರಕಾರ, ಪಕ್ಷವನ್ನು ನಿರ್ವಹಿಸಬೇಕಾಗುತ್ತದೆ ಎಂದು ಅವರು ಹೇಳಿದರು. 2013-18ರಲ್ಲಿದ್ದ ಸಿದ್ದರಾಮಯ್ಯ ಈಗ ಇಲ್ಲ ಅಂತಾ ಹೇಳಬಹುದು. ಅದು ಹೆಚ್ಚು ಕಡಿಮೆ ಜನರ ಅಭಿಪ್ರಾಯವೂ ಆಗಿದೆ. ಅದಕ್ಕೆ ಅನೇಕ ಶಕ್ತಿ ಕೇಂದ್ರಗಳೇ ಕಾರಣಗಳಾಗಿವೆ ಎಂದರು.
ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಶಿವಕುಮಾರ್ ಅವರ ಅಧಿಕಾರ ಹಂಚಿಕೆ ಒಪ್ಪಂದವನ್ನು ಉಲ್ಲೇಖಿಸಿ ಈ ವರ್ಷಾಂತ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ರಾಜಕೀಯ ವಲಯಗಳಲ್ಲಿ, ವಿಶೇಷವಾಗಿ ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಕೆಲವು ಸಮಯದಿಂದ ಊಹಾಪೋಹಗಳಿವೆ. ಆದರೆ ಪಕ್ಷದ ಹೈಕಮಾಂಡ್‌ನಿಂದ ಕಡಕ್ ಸೂಚನೆಯ ನಂತರ ಅಂತಹ ಮಾತುಗಳು ಹಿಂದೆ ಸರಿದಿವೆ. ಶಿವಕುಮಾರ್ ಹೊಂದಿರುವ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆಯೂ ಊಹಾಪೋಹಗಳಿವೆ.
ಆಡಳಿತಾರೂಢ ಕಾಂಗ್ರೆಸ್‌ನಲ್ಲಿ ಅಸಮಾಧಾನದ ನಡುವೆಯೇ ಸಚಿವರ ಹೇಳಿಕೆ ಬಂದಿದ್ದು, ಕೆಲವು ಶಾಸಕರು ತಮ್ಮದೇ ಪಕ್ಷದ ಸರ್ಕಾರದ ಕಾರ್ಯವೈಖರಿಯ ವಿರುದ್ಧ ಬಹಿರಂಗವಾಗಿ ಮಾತನಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
Advertisement