
ಬೆಂಗಳೂರು: ನಮ್ಮಲ್ಲಿ ಎಲ್ಲವೂ ಸರಿ ಇಲ್ಲ. ಆಂತರಿಕ ಭಿನ್ನಮತ ಒಳಗೊಳಗೇ ಕುದಿಯುತ್ತಿದೆ. ಎಲ್ಲ ಸರಿ ಇದೆ ಎಂದು ಕಂಡರೂ, ಬೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ಇದೆ’ ಎಂದು ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ.
ಸುದ್ದಿಗಾರ ಜತೆ ಮಾತನಾಡಿದ ಅವರು, ಯಾರನ್ನಾದರೂ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ತೊಂದರೆ ಇಲ್ಲ. ಆದರೆ ಕುತೂಹಲ ಹೆಚ್ಚಿಸುವ ಮೂಲಕ ಸಂಘಟನಾ ವೇಗಕ್ಕೆ ತಡೆ ಮಾಡುವುದು ಬೇಡ ಎಂದು ಪಕ್ಷದ ವರಿಷ್ಠರಿಗೆ ಬಹಿರಂಗವಾಗಿಯೇ ಮನವಿ ಮಾಡಿದ್ದಾರೆ.
ಯಾರನ್ನೇ ಅಧ್ಯಕ್ಷರನ್ನಾಗಿ ಮಾಡಿದರೂ ಪಕ್ಷದ ಕಾರ್ಯಕರ್ತರು ಕೆಲಸ ಮಾಡಲು ಸಿದ್ಧರಾಗಿದ್ದಾರೆ. ಈ ಬಗ್ಗೆ ಒಬ್ಬೊಬ್ಬರು ಒಂದು ರೀತಿಯ ಹೇಳಿಕೆ ನೀಡದಂತೆ ವರಿಷ್ಠರು ಕಡಿವಾಣ ಹಾಕಬೇಕಾಗಿದೆ ಎಂದು ಹೇಳಿದರು.
ನಮ್ಮಲ್ಲಿ ಕೋರ್ ಕಮಿಟಿ ಇದ್ದರೂ ಕೇವಲ ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಆಗಿದೆಯೇ ಹೊರತು ನಿಜವಾದ ಅರ್ಥದಲ್ಲಿ ವಿಷಯಾಧಾರಿತ ಚರ್ಚೆ ನಡೆಯುತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಸಂಬಂಧ ಕೋರ್ ಕಮಿಟಿ ಸದಸ್ಯರು, ಪಕ್ಷ ಕಟ್ಟಿ ಬೆಳೆಸಿದವರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕು. ಆದರೆ, ಆ ಕೆಲಸ ಆಗುತ್ತಿಲ್ಲ ಎಂದು ಬೇಸರದಿಂದ ಹೇಳಿದರು.
ಪಕ್ಷದಲ್ಲಿ ಶುದ್ಧೀಕರಣ ಆರಂಭವಾಗಿದೆ. ಈ ಕೆಲಸ ಕೇವಲ ಪ್ರೋಕ್ಷಣೆಯಿಂದ ಆಗುವುದಿಲ್ಲ. ಅದೂ ಕೂಡ ಒಳ್ಳೆಯ ರೀತಿಯಲ್ಲಿ ಆಗಬೇಕು. ಕೆಲವರನ್ನು ಹೊರಗೆ ಹಾಕುವ ಮೂಲಕ ಶುದ್ಧೀಕರಣ ಆರಂಭವಾಗಿದೆ ಎಂದರು.
ಶುದ್ಧೀಕರಣ ಆರಂಭ ಆಗಿದೆ. ಆದರೆ, ಶುದ್ಧೀಕರಣ ಕೇವಲ ಪ್ರೋಕ್ಷಣೆಯಿಂದ ಆಗಲ್ಲ. ರಾಜಕೀಯದಲ್ಲಿ ಸ್ನಾನ ಮಾಡಿದರೆ ಮಾತ್ರ ಶುದ್ಧೀಕರಣ. ಮತ್ತು ಆ ಸ್ನಾನ ಕೂಡ ಒಳ್ಳೆಯ ರೀತಿಯಿಂದ ಮಾಡಬೇಕು. ಕೇವಲ ಪ್ರೋಕ್ಷಣೆಯಿಂದ ರಾಜಕೀಯದಲ್ಲಿ ಶುದ್ಧೀಕರಣ ಆಗೋದಿಲ್ಲ. ಎಲ್ಲದಕ್ಕೂ ಸ್ವಲ್ಪ ಸಮಯ ಬೇಕಾಗುತ್ತದೆ. ಈಗ ಕೆಲವರನ್ನು ಹೊರಗೆ ಹಾಕುವ ಮೂಲಕ ಶುದ್ಧೀಕರಣ ಆರಂಭವಾಗಿದೆ ಎಂದು ತಿಳಿಸಿದರು.
ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಪ್ರತಿಪಕ್ಷದ ನಾಯಕ ಅಶೋಕ್ ನಡುವೆ ಹೊಂದಾಣಿಕೆ ಕೊರತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇಬ್ಬರೂ ಬಾಹ್ಯವಾಗಿ ಚೆನ್ನಾಗಿಯೇ ಇದ್ದಾರೆ. ಆಂತರಿಕವಾಗಿ ಹೇಗಿದ್ದಾರೆ ಎನ್ನುವುದು ಗೊತ್ತಿಲ್ಲ. ಅಲ್ಲಿಂದ ಇಲ್ಲಿಂದ ಒಂದೊಂದು ಸುದ್ದಿ ಬರುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.
Advertisement