
ಬೆಂಗಳೂರು: ರಾಜ್ಯ ಸರ್ಕಾರ ಸುಭದ್ರವಾಗಿದ್ದು, ಐದು ವರ್ಷ ಆಡಳಿತ ನಡೆಸಲಿದೆ. ಮಹಾರಾಷ್ಟ್ರದ ಹಾಗೆ ಇಲ್ಲಿ ಯಾವ ಬೆಳವಣಿಗೆಗಳೂ ನಡೆಯುವುದಿಲ್ಲ. ಏಕನಾಥ ಶಿಂದೆ ರೀತಿ ಶಾಸಕರನ್ನು ಕರೆದುಕೊಂಡು ಯಾರೂ ಬಿಜೆಪಿಗೆ ಹೋಗುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಬಿ.ವೈ.ವಿಜಯೇಂದ್ರ ಹೇಳಿದಂತೆ ಕಾಂಗ್ರೆಸ್‌ನಲ್ಲಿ ಯಾವ ಕ್ಷಿಪ್ರ ಕ್ರಾಂತಿಯೂ ನಡೆಯುವುದಿಲ್ಲ. ಬಿಜೆಪಿಯಲ್ಲೇ ಹಲವು ಬಣಗಳ ನಡುವೆ ಒಳಜಗಳವಿದೆ. ಅವರಲ್ಲೇ ಕ್ರಾಂತಿ ಆದರೂ ಆಗಬಹುದು. ಏಕನಾಥ ಶಿಂದೆ ರೀತಿ ಕಾಂಗ್ರೆಸ್ ನಾಯಕರೊಬ್ಬರು ಶಾಸಕರ ಪಡೆಯೊಂದಿಗೆ ಬಿಜೆಪಿ ಸೇರುತ್ತಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿರುವುದು ಹಾಸ್ಯಾಸ್ಪದ ಎಂದು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಈಶ ಫೌಂಡೇಷನ್‌ನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಜೊತೆ ಕಾಣಿಸಿಕೊಂಡ ಮಾತ್ರಕ್ಕೆ ಸರ್ಕಾರ ಬಿದ್ದು ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಎಂದರು. ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ಮುಖಂಡರು ವ್ಯಂಗ್ಯ ಮಾಡುತ್ತಿದ್ದರು.
ರಾಜ್ಯಕ್ಕೆ ಆರ್ಥಿಕ ದುಸ್ಥಿತಿ ಬರುತ್ತದೆ ಎನ್ನುತ್ತಿದ್ದರು. ದೆಹಲಿ, ಮಹಾರಾಷ್ಟ್ರದಲ್ಲಿ ಅವರೂ ಗ್ಯಾರಂಟಿ ಕೊಟ್ಟಿದ್ದಾರೆ. ಅದನ್ನು ಹೇಗೆ ಜಾರಿ ಮಾಡುತ್ತಾರೋ ನೋಡೋಣ’ ಎಂದು ತಿಳಿಸಿದರು.
ಇನ್ನೂ ಮಹತ್ವದ ಬೆಳವಣಿಗೆಯೊಂದರಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಹಾಗೂ ಮಾಜಿ ಸಂಸದ ಡಿ.ಕೆ.ಸುರೇಶ್ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ಶಿವಾನಂದ ವೃತ್ತದ ಸಮೀಪದಲ್ಲಿ ಸತೀಶ್ ಜಾರಕಿಹೊಳಿ ಅವರ ನಿವಾಸಕ್ಕೆ ಖುದ್ದು ಭೇಟಿ ನೀಡಿದ ಡಿ.ಕೆ.ಸುರೇಶ್ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದ್ದಾರೆ. ‘ಕೆಪಿಸಿಸಿ ಅಧ್ಯಕ್ಷರ ಬದಲಾವಣೆ’ ಸಂಬಂಧ ಇತ್ತೀಚೆಗೆ ಬಹಿರಂಗ ಹೇಳಿಕೆ ನೀಡಿದ್ದ ಸಚಿವ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದರು.
ಸಚಿವ ಸತೀಶ್ ಜಾರಕಿಹೊಳಿ ಭೇಟಿ ಬಳಿಕ ಮಾತನಾಡಿದ ಡಿ.ಕೆ.ಸುರೇಶ್, ‘ರಾಮನಗರ ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಲು ಅವರ ನಿವಾಸಕ್ಕೆ ಬಂದಿದ್ದೆ. ನಾನು ಅವರ ಮನೆಗೆ ಆಗಾಗ ಬರುತ್ತಿರುತ್ತೇನೆ. ಇದರಲ್ಲಿ ಹೊಸದೇನು ಇಲ್ಲ. ಈ ಭೇಟಿ ನನ್ನ ವೈಯಕ್ತಿಕ ಅಷ್ಟೇ’ ಎಂದು ಸ್ಪಷ್ಟಣೆ ನೀಡಿದರು.
Advertisement