
ಹಾವೇರಿ: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಊಹಾಪೋಹಗಳ ನಡುವೆ ಹಣಕಾಸು ಖಾತೆಯನ್ನು ಹೊಂದಿರುವ ಹಾಲಿ ಸಿಎಂ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ. ಮುಂದಿನ ವರ್ಷವೂ ಬಜೆಟ್ ಮಂಡಿಸಲಿದ್ದಾರೆ ಎಂದು ಸಹಕಾರ ಸಚಿವ ಕೆ. ಎನ್. ರಾಜಣ್ಣ ತಿಳಿಸಿದ್ದಾರೆ.
ಆದಾಗ್ಯೂ, ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಹೈಕಮಾಂಡ್ ಗೆ ಬಿಟ್ಟ ವಿಚಾರ ಎಂದಿದ್ದಾರೆ. ಸಿದ್ದರಾಮಯ್ಯ ಶುಕ್ರವಾರ ದಾಖಲೆಯ 16ನೇ ಬಜೆಟ್ ಮಂಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ಸಿದ್ದರಾಮಯ್ಯ ಮುಂದಿನ 2026-27 ಮತ್ತು 2027-28ನೇ ಸಾಲಿನ ಬಜೆಟ್ ಕೂಡಾ ಮಂಡಿಸಲಿದ್ದಾರೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಒಂದು ವೇಳೆ ಏನಾದರೂ ಊಹಾಪೋಹ ಅಥವಾ ಬದಲಾವಣೆಯಾದರೆ ಹೈಕಮಾಂಡ್ ನಿರ್ಧಾರದಂತೆ ಆಗಲಿದೆ. ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ ಎಂಬುದು ನಮ್ಮೆಲ್ಲರ ನಿರೀಕ್ಷೆ. ಆದರೆ ಅಂತಿಮವಾಗಿ ಹೈಕಮಾಂಡ್ ನಿರ್ಧರಿಸಲಿದೆ ಎಂದರು.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಸೂತ್ರದನ್ವಯ ಈ ವರ್ಷದ ನಂತರ ನಾಯಕತ್ವ ಬದಲಾವಣೆಯಾಲಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಅವರು ಕೂಡಾ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರೇ ಮುಂದಿನ ಬಾರಿಯೂ ಬಜೆಟ್ ಮಂಡಿಸಲಿದ್ದಾರೆ ಎಂಬ ಕೆಎನ್ ರಾಜಣ್ಣ ಅವರ ಹೇಳಿಕೆ ಮಹತ್ವ ಪಡೆದಿದೆ.
Advertisement