ವಿಜಯೇಂದ್ರಗೆ ದುಬೈ ಕನೆಕ್ಷನ್ ಜಾಸ್ತಿ ಎಂದು ಯತ್ನಾಳ್ ಹೇಳ್ತಾರೆ; ಆ ಬಗ್ಗೆಯೂ ತನಿಖೆಯಾಗಲಿ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರಿಗೆ ದುಬೈ ನಂಟಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳುತ್ತಿದ್ದಾರೆ. ಹೀಗಾಗಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ವಿಜಯೇಂದ್ರ ಕೈವಾಡ ಇದೆಯೇ ಎಂಬ ದಿಕ್ಕಿನಲ್ಲೂ ತನಿಖೆ ನಡೆಯಬೇಕು ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಮಂಗಳವಾರ ಹೇಳಿದ್ದಾರೆ.
ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇಬ್ಬರ ಸಚಿವರು ಶಾಮೀಲಾಗಿದ್ದರೆ ಎಂದು ಬಿವೈ ವಿಜಯೇಂದ್ರ ಆರೋಪಿಸಿದ್ದು, ಇಂದು ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ ಅವರು, ಆ ಸಚಿವರ ಹೆಸರು ಹೇಳಲಿ. ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ ಎಂದು ತಿರುಗೇಟು ನೀಡಿದ್ದಾರೆ.
ಸಿಬಿಐ ಮತ್ತು ಡಿಆರ್‌ಐ ಎರಡೂ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಂಸ್ಥೆಗಳು, ತನಿಖೆ ಮಾಡಿಸಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಜಯೇಂದ್ರ ಅವರಿಗೆ ದುಬೈ ಕನೆಕ್ಷನ್ ಜಾಸ್ತಿ, ಅಲ್ಲೂ ಅವರ ಬ್ಯಾಂಕ್ ಖಾತೆಗಳಿವೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಅವರಿಗೆ ಸಚಿವರು ಶಾಮೀಲಾಗಿರುವ ಬಗ್ಗೆ ಮಾಹಿತಿ ಇರಬಹುದು, ಹೆಸರು ಹೇಳಲಿ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಆದಾಗ್ಯೂ ಸಿಬಿಐ ಮೂಲಕ ಬಿಜೆಪಿಯವರು ತನಿಖೆಯನ್ನು ಹಳ್ಳ ಹಿಡಿಸುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಯಾಕೆಂದರೆ, ರನ್ಯಾ ರಾವ್‌ಗೆ 12 ಎಕರೆ ಜಾಗ ಕೊಟ್ಟಿರೋದೆ ಬಿಜೆಪಿ ಸರ್ಕಾರ. ಅಂದರೆ, ಆಕೆಯ ಜೊತೆಗೆ ಬಿಜೆಪಿ ನಾಯಕರಿಗೆ ಅಷ್ಟೊಂದು ನಿಕಟ ಸಂಪರ್ಕ ಇದೆ ಎಂದು ಅಂದಾಜಿಸಬಹುದು. ಇಲ್ಲದಿದ್ದರೆ 12 ಎಕರೆ ಜಾಗ ಮಂಜೂರು ಮಾಡುವುದು ಸಾಧ್ಯವೇ? ಈ ದಿಕ್ಕಿನಲ್ಲಿ ನಿಷ್ಪಕ್ಷಪಾತ ತನಿಖೆ ನಡೆದಾಗಲೇ ಸತ್ಯ ಹೊರಬರಬಹುದು ಎಂದು ಸಚಿವರು ಹೇಳಿದ್ದಾರೆ.
ದುಬೈನಿಂದ 14.80 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ರನ್ಯಾ ರಾವ್ ಅವರನ್ನು ಮಾರ್ಚ್ 3 ರಂದು ಬಂಧಿಸಿದೆ.
ಬೆಂಗಳೂರಿನ ಸುತ್ತಲೂ ಕೇಂದ್ರೀಕೃತವಾಗಿರುವ ಈ ಪ್ರಕರಣವು ರಾಜ್ಯ ಸರ್ಕಾರದ ಪ್ರಭಾವಿ ವ್ಯಕ್ತಿಗಳ ಸುತ್ತ ಅನುಮಾನ ಹುಟ್ಟುಹಾಕಿದೆ. ಪ್ರಕರಣದಲ್ಲಿ ಇಬ್ಬರು ಸಚಿವರು ಭಾಗಿಯಾಗಿರುವ ಕುರಿತು ವರದಿಯಾಗಿದ್ದು, ಇದು ತುಂಬಾ ಕಳವಳಕಾರಿ ಬೆಳವಣಿಗೆ ಎಂದು ವಿಜಯೇಂದ್ರ ಹೇಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ