ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು, ಬೂತ್ ಮಟ್ಟದಿಂದ ಬಿಜೆಪಿ- ಜೆಡಿಎಸ್ ವಿರುದ್ಧ ಹೋರಾಡಿ: ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಡಿಕೆಶಿ ಕಿವಿಮಾತು

ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಪಿಯುಸಿ ಚುನಾವಣೆಯಲ್ಲಿ ಗೆದ್ದಿದ್ದೆ. ಪದವಿಯಲ್ಲಿದ್ದಾಗ ಚುನಾವಣೆಯಲ್ಲಿ ಸೋತಿದ್ದೆ. ಆನಂತರ ನನ್ನ ಗೆಲುವು ಆರಂಭವಾಯಿತು. ನಂತರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸೋತೆ. ಆನಂತರ ಸತತವಾಗಿ ಗೆಲ್ಲುತ್ತಾ ಬಂದಿದ್ದೇನೆ.
Dk shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಯುವ ಕಾಂಗ್ರೆಸ್ ಚುನಾವಣೆ ಮುಗಿದಿದೆ. ಚುನಾವಣೆಯಲ್ಲಿ ಗೆದ್ದವರು, ಸೋತವರು ಎಲ್ಲರೂ ಒಗ್ಗಟ್ಟಾಗಿ ಸೈದ್ಧಾಂತಿಕವಾಗಿ ರಾಜಕೀಯ ಎದುರಾಳಿಗಳಾಗಿರುವ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ವಿರುದ್ಧ ಎಲ್ಲಾ ಬೂತ್ ಮಟ್ಟದಲ್ಲಿ ಹೋರಾಟ ಮಾಡಬೇಕು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕರೆ ನೀಡಿದರು.

ಅರಮನೆ ಮೈದಾನದಲ್ಲಿ ಸೋಮವಾರ ನಡೆದ “ಯುವ ಸಂಕಲ್ಪ” ಪದಗ್ರಹಣ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ಚುನಾವಣೆ ಮೂಲಕ ಆಯ್ಕೆಯಾದ ನೂತನ ಪದಾಧಿಕಾರಿಗಳಿಗೆ ಕೆಪಿಸಿಸಿ ಅಧ್ಯಕ್ಷರೂ ಆದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ನಂತರ ಡಿ.ಕೆ. ಶಿವಕುಮಾರ್ ಹಾಗೂ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಮೊಹಮದ್ ಹ್ಯಾರಿಸ್ ನಲಪಾಡ್ ಅವರು ನೂತನ ಅಧ್ಯಕ್ಷರಾದ ಮಂಜುನಾಥ್ ಗೌಡ ಅವರಿಗೆ ಕಾಂಗ್ರೆಸ್ ಧ್ವಜ ಹಸ್ತಾಂತರ ಮಾಡಿದರು.

ಈ ವೇಳೆ ಮಾತನಾಡಿದ ಶಿವಕುಮಾರ್ ಅವರು, “ಕರ್ನಾಟಕ ರಾಜ್ಯದಲ್ಲಿ 25 ಲಕ್ಷ ಯುವ ಕಾಂಗ್ರೆಸ್ ಸದಸ್ಯತ್ವ ಮಾಡಲಾಗಿದೆ ಎಂಬ ವರದಿ ಬಂದಿದೆ. ಇಲ್ಲಿ 15-20 ಸಾವಿರ ಸದಸ್ಯರು ಬಂದಿದ್ದೀರಿ. ಉಳಿದ ಸದಸ್ಯರು ಎಲ್ಲಿ ಹೋದರು ಎಂದು ಕೇಳಲು ಬಯಸುತ್ತೇನೆ. 25 ಲಕ್ಷ ಸದಸ್ಯತ್ವ ದೊಡ್ಡ ಮಟ್ಟದಲ್ಲಿ ತಾಲೂಕು ಮಟ್ಟದ ಅಧ್ಯಕ್ಷರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಇಂತಹುದೇ ಪದಗ್ರಹಣ ಕಾರ್ಯಕ್ರಮ ಮಾಡಬೇಕು. ಆ ಕಾರ್ಯಕ್ರಮಕ್ಕೆ ಆ ತಾಲೂಕಿನ ಯುವ ಕಾಂಗ್ರೆಸ್ ಸದಸ್ಯರನ್ನು ಆಹ್ವಾನಿಸಬೇಕು.

ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸದಸ್ಯತ್ವ ಪಡೆದವರಿಂದ ಮತ ಹಾಕಿಸಿಕೊಂಡು ನಂತರ ಅವರನ್ನು ಬಿಡುವುದಲ್ಲ. ಸದಸ್ಯತ್ವ ಪಡೆದವರು ಕಾಂಗ್ರೆಸ್ ಪಕ್ಷದ ಲೆಕ್ಕದಲ್ಲಿರಬೇಕು. ಆಗ ಯಾರೆಲ್ಲಾ ನಿಜವಾದ ಸದಸ್ಯರು ಎಂಬುದು ತಿಳಿಯುತ್ತದೆ” ಎಂದು ತಿಳಿಸಿದರು.

Dk shivakumar
ದೇವೇಗೌಡರ ವಿರುದ್ಧ ಸ್ಪರ್ಧಿಸಲು ನನಗೆ ಮೊದಲು ಟಿಕೆಟ್ ಕೊಟ್ಟಿದ್ದು ಕೆ.ಹೆಚ್ ಪಾಟೀಲ್: ಡಿ.ಕೆ ಶಿವಕುಮಾರ್

ಮಹಾತ್ಮಾ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವ ಆಚರಿಸಿದೆವು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ, ಕಾಂಗ್ರೆಸ್ ಇತಿಹಾಸ ದೇಶದ ಇತಿಹಾಸ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ವರ್ಗದ ಜನನ ಅದಿಕಾರಕ್ಕೆ ಬಂದಂತೆ. ಇಂದು ನೀವೆಲ್ಲರೂ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪದಾಧಿಕಾರಿಗಳಿದ್ದೀರಿ. ನಿಮಗೆಲ್ಲರಿಗೂ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಅವರ ಪರವಾಗಿ ತುಬು ಹೃದಯದ ಶುಭಾಶಯ ಅರ್ಪಿಸಲು ಬಯಸುತ್ತೇನೆ.

ರಾಜಕೀಯದಲ್ಲಿ ಚುನಾವಣೆ ಗೆಲುವು ಸೋಲು ಸಹಜ. ಚುನಾವಣೆಯಲ್ಲಿ ಸ್ಪರ್ಧಿಸಿದವರೆಲ್ಲಾ ಗೆಲ್ಲಲು ಆಗುವುದಿಲ್ಲ. ಚುನಾವಣೆಯಲ್ಲಿ ಗೆದ್ದವರೆಲ್ಲಾ ನಾಯಕರಲ್ಲ. ಯಾರು ಪ್ರಾಮಾಣಿಕವಾಗಿ ಪಕ್ಷವನ್ನು ಶಿಸ್ತಿನಿಂದ ಸಂಘಟನೆ ಮಾಡುತ್ತಾರೋ, ಕಾಂಗ್ರೆಸ್ ತತ್ವ ಸಿದ್ಧಾಂತ ಬೆಳೆಸಿಕೊಂಡು, ದೇಶದ ಸಮಗ್ರತೆ, ಐಕ್ಯತೆ ಕಾಪಾಡಿಕೊಂಡು ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತಿ ಕಾಪಾಡುವವರು ನಿಜವಾದ ನಾಯಕ. ಅವರೇ ನಿಜವಾದ ಕಾಂಗ್ರೆಸಿಗ” ಎಂದು ತಿಳಿಸಿದರು.

ನಾನು ವಿದ್ಯಾರ್ಥಿ ನಾಯಕನಾಗಿದ್ದಾಗ ಪಿಯುಸಿ ಚುನಾವಣೆಯಲ್ಲಿ ಗೆದ್ದಿದ್ದೆ. ಪದವಿಯಲ್ಲಿದ್ದಾಗ ಚುನಾವಣೆಯಲ್ಲಿ ಸೋತಿದ್ದೆ. ಆನಂತರ ನನ್ನ ಗೆಲುವು ಆರಂಭವಾಯಿತು. ನಂತರ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಸೋತೆ. ಆನಂತರ ಸತತವಾಗಿ ಗೆಲ್ಲುತ್ತಾ ಬಂದಿದ್ದೇನೆ. ನಾನು ಬಂಗಾರಪ್ಪನವರ ಸಂಪುಟದಲ್ಲಿ ಮಂತ್ರಿಯಾದಾಗ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿದ್ದೆ. ಆ ನಂತರ ನಾರಾಯಣಸ್ವಾಮಿ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದೆ. ನಾನು ಹಾಗೂ ವಿನಯ್ ಕುಮಾರ್ ಸೊರಕೆ ಒಟ್ಟಾಗಿ ಎನ್ಎಸ್ ಯುಐ, ಯುವ ಕಾಂಗ್ರೆಸ್ ಸಂಘಟನೆ ಮಾಡಿಕೊಂಡು ಹಂತ ಹಂತವಾಗಿ ಇಲ್ಲಿಯವರೆಗೂ ಬಂದಿದ್ದೇವೆ” ಎಂದು ತಿಳಿಸಿದರು.

ಶಿಸ್ತು ಇಲ್ಲದಿದ್ದರೆ ಯಾರೂ ನಾಯಕರಾಗುವುದಿಲ್ಲ. ಶಿಸ್ತೇ ನಿಮ್ಮ ಯಶಸ್ಸಿನ ಮೂಲಮಂತ್ರ. ಪೋಸ್ಟರ್ ಬ್ಯಾನರ್ ಹಾಕಿದಾಕ್ಷಣ ನೀವು ನಾಯಕರಾಗುವುದಿಲ್ಲ. ನಿಮ್ಮ ಸಮರ ಸಿದ್ದಾಂತದ ಮೇಲೆ ಇರಬೇಕು. ಬೂತ್ ಮಟ್ಟದಲ್ಲಿ ಬಿಜೆಪಿ ಹಾಗೂ ಜನತಾ ದಳದವರ ವಿರುದ್ಧ ಇರಬೇಕೇ ಹೊರತು ಪೋಸ್ಟರ್ ಹಾಕಿಕೊಂಡು ಮಾಡುವುದಲ್ಲ. ನಿಮ್ಮ ಪೋಸ್ಟರ್ ನಿಮ್ಮ ಬೂತ್ ಮಟ್ಟದಲ್ಲಿ ಇರಬೇಕು. ಪೋಸ್ಟರ್ ಹಾಕುವಾಗ ಶಿಷ್ಟಾಚಾರ ಪಾಲನೆ ಮಾಡಬೇಕು. ನಿಮಗೆ ಹಸ್ತದ ಚಿಹ್ನೆಗೆ ಮತ ಹಾಕುತ್ತಾರೆ ಎಂಬುದನ್ನು ಮರೆಯಬೇಡಿ. ಅಡುಗೆ ಬೆಂದಾಗ ರುಚಿ ಇರುತ್ತದೆ, ಅದೇ ರೀತಿ ಜೀವನದಲ್ಲಿ ನೊಂದಾಗ ನಮಗೆ ಬುದ್ಧಿ ಕಲಿಸುತ್ತದೆ. ನೀವು ನಿಮ್ಮಲ್ಲಿರುವ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಕಿವಿಮಾತು ಹೇಳಿದರು.

Dk shivakumar
ರಾಜ್ಯದ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳು ಮಹಿಳೆಯರಿಗೆ ಮೀಸಲು: ಡಿಸಿಎಂ ಡಿ.ಕೆ ಶಿವಕುಮಾರ್

ನಿಮ್ಮ ದೃಷ್ಟಿ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಜತೆಗಿರಬೇಕು. ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ನಿಮ್ಮ ವಿರುದ್ಧ ಟೀಕೆಗಳು ಬಂದರೂ ಧೃತಿಗೆಡದೆ, ಶಾಶ್ವತವಾಗಿ ಉಳಿಯುವಂತಹ ಕೆಲಸಗಳನ್ನು ಮಾಡಬೇಕು. ಸಂತೋಷದಲ್ಲಿ ಆಶ್ವಾಸನೆ, ಕೋಪದಲ್ಲಿ ಉತ್ತರ, ದುಃಖದಲ್ಲಿ ನಿರ್ಧಾರ ಮಾಡಬೇಡಿ. ನಾವೆಲ್ಲರೂ ಪಕ್ಷದ ಧ್ವಜವಾಗಿ ದೇಶದ ತ್ರಿವರ್ಣ ಧ್ವಜವನ್ನು ಹಾಕಿಕೊಳ್ಳುತ್ತಿದ್ದೇವೆ. ಬಿಜೆಪಿ ಹಾಗೂ ಜನತಾ ದಳದವರು ಈ ಶಾಲನ್ನು ಹಾಕಿಕೊಳ್ಳಲು ಸಾಧ್ಯವೇ? ಕೇವಲ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾತ್ರ ಈ ಅವಕಾಶ ಸಿಗುತ್ತದೆ” ಎಂದು ಹೇಳಿದರು.

ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಸೂರ್ಯ ಹುಟ್ಟುತ್ತಾನೆ, ಮುಳುಗುತ್ತಾನೆ. ರಾಜಕೀಯದಲ್ಲಿ ಯಾವುದೂ ಶಾಶ್ವತವಿಲ್ಲ. ನಾನು ಪಕ್ಷದ ಅಧ್ಯಕ್ಷನಾಗಿ ಅಧಿಕಾರ ಸ್ವೀಕರಿಸುವಾಗ ಒಂದು ಮಾತು ಕೊಟ್ಟಿದೆ. ಮಹಿಳೆಯರು ಹಾಗೂ ಯುವಕರಿಗಾಗಿ ಕಾರ್ಯಕ್ರಮ ನೀಡುವುದಾಗಿ ಹೇಳಿದ್ದೆ. ಅದರಂತೆ ಯುವ ನಿಧಿ ಹಾಗೂ ಗೃಹಲಕ್ಷ್ಮಿ, ಗೃಹಜ್ಯೋತಿ, ಶಕ್ತಿ, ಅನಭಾಗ್ಯ ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಬಿಜೆಪಿಯವರು ಭಾವನೆ ಮೇಲೆ ರಾಜಕೀಯ ಮಾಡಿದರೆ, ಕಾಂಗ್ರೆಸ್ ಪಕ್ಷ ಬದುಕಿನ ಮೇಲೆ ರಾಜಕೀಯ ಮಾಡುತ್ತಿದೆ. ಪ್ರತಿ ಬೂತ್ ಮಟ್ಟದಲ್ಲಿ ಡಿಜಿಟಲ್ ಯೂಥ್ ಇರಬೇಕು ಎಂದು ಹೇಳುತ್ತಲೇ ಇದ್ದೇನೆ. ನೂತನ ಅಧ್ಯಕ್ಷರಾದ ಮಂಜುನಾಥ್ ಗೌಡ ಅವರಿಗೂ ನಾನು ಇದನ್ನು ಹೇಳಬಯಸುತ್ತೇನೆ. ಇದರಲ್ಲಿ ಯಾವುದೇ ರಾಜಿಯಿಲ್ಲ. ಪ್ರತಿ ಬೂತ್ ನಲ್ಲಿ 25 ಕಾರ್ಯಕರ್ತರ ಪಡೆ ರಚಿಸಬೇಕು. ಆ ಬೂತ್ ಜವಾಬ್ದಾರಿಯನ್ನು ಅವರಿಗೆ ನೀಡಬೇಕು. ಯಾರು ಬೂತ್ ಮಟ್ಟದಲ್ಲಿ ಹೆಚ್ಚಿನ ಮತ ಕೊಡಿಸುತ್ತಾರೋ ಅವರೇ ನಿಜವಾದ ನಾಯಕರು. ಇದನ್ನು ಬಿಟ್ಟು, ನನ್ನ ಹಾಗೂ ಸಿದ್ದರಾಮಯ್ಯ ಅವರ ಸುತ್ತ ಗಿರಕಿ ಹೊಡೆದರೆ ನಾಯಕರಾಗುವುದಿಲ್ಲ. ಫೋಟೋ ಹಾಕಿಕೊಂಡು ನನ್ನ ಮನೆ ಮುಂದೆ ಕಟೌಟ್ ಹಾಕಿದರೆ ನಿಮ್ಮನ್ನು ನಾಯಕನೆಂದು ನಾನು ಭಾವಿಸುತ್ತೇನೆ ಎಂದು ಅಂದುಕೊಂಡರೆ ಅದು ನಿಮ್ಮ ಭ್ರಮೆ” ಎಂದು ತಿಳಿಸಿದರು.

“ಬೂತ್ ಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಟ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವವನು ಮಾತ್ರ ನಿಜವಾದ ನಾಯಕ. ಇಲ್ಲಿ ಚುನಾವಣೆಯಲ್ಲಿ ಗೆದ್ದಿರುವವರಷ್ಟೇ ನಮ್ಮ ಪಾಲಿನ ನಾಯಕರಲ್ಲ. ನಿಮ್ಮ ಪರವಾಗಿ ಕೆಲಸ ಮಾಡಿ ನಿಮ್ಮನ್ನು ಗೆಲ್ಲಿಸಿರುವ ಕಾರ್ಯಕರ್ತರು ನಮ್ಮ ನಿಜವಾದ ನಾಯಕರು. ಅವೆರೆಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ನಿಮ್ಮ ಚುನಾವಣೆ ಮುಗಿದಿದೆ. ಇದು ಆಂತರಿಕ ಚುನಾವಣೆಯಷ್ಟೇ. ನಿಮ್ಮ ನಿಜವಾದ ಹೋರಾಟ ಏನೇ ಇದ್ದರು, ಮುಂಬರುವ ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಪಾಲಿಕೆ ಚುನಾವಣೆಯಲ್ಲಿ ತೋರಿಸಬೇಕು. 2028ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಹೋರಾಟ ಮಾಡಬೇಕು” ಎಂದು ಕರೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com