
ಬೆಂಗಳೂರು: ಹನಿ ಟ್ರ್ಯಾಪ್ ವಿವಾದದ ಮಧ್ಯೆ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಕಾಂಗ್ರೆಸ್ ಸರ್ಕಾರ, ತನ್ನ ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರು ಸೇರಿದಂತೆ ಪ್ರಮುಖ ರಾಜ್ಯ ನಾಯಕರ ಫೋನ್‌ಗಳನ್ನು "ಟ್ಯಾಪ್" ಮಾಡುತ್ತಿದೆ ಎಂದು ಸೋಮವಾರ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ತನ್ನ ಆಂತರಿಕ ವಿರೋಧಿಗಳು ಮತ್ತು ವಿರೋಧ ಪಕ್ಷಗಳನ್ನು ನಿಯಂತ್ರಿಸಲು ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ. ಅಲ್ಲದೆ ಇದನ್ನು ಹಲವಾರು ಆಡಳಿತ ಪಕ್ಷದ ಶಾಸಕರು ಸಹ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಫೋನ್ ಕದ್ದಾಲಿಕೆ ಮಾಡ್ತಿರುವುದು ನೂರಕ್ಕೆ ನೂರರಷ್ಟು ಸತ್ಯ. ಇದರಲ್ಲಿ ಯಾವುದೇ ಅನುಮಾನ ಬೇಡ. ಆಡಳಿತ ಮತ್ತು ವಿರೋಧ ಪಕ್ಷದ ನಾಯಕರ ಫೋನ್ ಕದ್ದಾಲಿಕೆ ಆಗ್ತಿದೆ. ನನ್ನ ಮತ್ತು ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ಆಗ್ತಿದೆ. ರಾಜೇಂದ್ರ ಹಾಗೂ ರಾಜಣ್ಣ ಅವರ ಫೋನ್ ಕದ್ದಾಲಿಕೆ ಆಗಿದೆ ಎಂದು ಆರೋಪಿಸಿದ್ದಾರೆ.
ಹಲವು ಶಾಸಕರ ಫೋನ್ ಕದ್ದಾಲಿಕೆ ಆಗಿದೆ. ಆಡಳಿತ ಪಕ್ಷದವರದ್ದು ಆಗಿದೆ. ವಿಪಕ್ಷದವರದ್ದು ಆಗಿದೆ. ಸ್ವತಃ ಆಡಳಿತ ಪಕ್ಷದ ಶಾಸಕರು ಸಹ ತಮ್ಮ ಫೋನ್‌ಗಳನ್ನು ಕದ್ದಾಲಿಸಲಾಗುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ, ಇದು ಆರೋಪವನ್ನು ಮತ್ತಷ್ಟು ದೃಢಪಡಿಸುತ್ತದೆ ಎಂದರು.
"ಸರ್ಕಾರವು ಆಡಳಿತ ಪಕ್ಷದವರಾಗಿರಲಿ ಅಥವಾ ವಿರೋಧ ಪಕ್ಷದವರಾಗಿರಲಿ ತನ್ನ ವಿರೋಧಿಗಳನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ನನ್ನ ಫೋನ್ ಮತ್ತು ಎಲ್ಲಾ ವಿರೋಧ ಪಕ್ಷದ ಶಾಸಕರ ಫೋನ್‌ಗಳನ್ನು ಕದ್ದಾಲಿಸಲಾಗುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಇದು ನಡೆಯುತ್ತಲೇ ಇದೆ" ಎಂದು ಅಶೋಕ್ ಹೇಳಿದ್ದಾರೆ.
ಇನ್ನು, ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, ಪೊಲೀಸ್ ದೂರು ದಾಖಲಿಸುವಂತೆ ಅಶೋಕ್ ಅವರಿಗೆ ಸಲಹೆ ನೀಡಿದರು.
ಏತನ್ಮಧ್ಯೆ, ರಾಜ್ಯ ಗೃಹ ಸಚಿವ ಜಿ ಪರಮೇಶ್ವರ ಅವರು, ಫೋನ್ ಕದ್ದಾಲಿಕೆ ಸಂಬಂಧ ಇದುವರೆಗೆ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿದ್ದಾರೆ.
"ನಮಗೆ ಇನ್ನೂ ಯಾವುದೇ ದೂರು ಬಂದಿಲ್ಲ. ನಮಗೆ ಒಂದು ದೂರು ಬಂದರೆ ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ನೀವು ಈ ವಿಷಯವನ್ನು ಎತ್ತಿದ ನಂತರ, ನಾನು ಅದನ್ನು ಪರಿಶೀಲಿಸಿದ್ದೇನೆ. ಆದರೆ ಇಲ್ಲಿಯವರೆಗೆ, ಯಾವುದೇ ಪೊಲೀಸ್ ಠಾಣೆಯಲ್ಲಿ ಅಂತಹ ದೂರು ಬಂದಿಲ್ಲ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
Advertisement