2028ಕ್ಕೆ ನಾನೇ ಸಿಎಂ: ಉಚ್ಛಾಟನೆ ಬೆನ್ನಲ್ಲೇ ಅಪ್ಪ-ಮಗನ ವಿರುದ್ಧ ತೊಡೆ ತಟ್ಟಿದ ಶಾಸಕ ಯತ್ನಾಳ್!

2028ಕ್ಕೆ ಯಡಿಯೂರಪ್ಪ ಮಗ ವಿಜಯೇಂದ್ರನೇ ಸಿಎಂ ಆಗಬೇಕಾ? ಅವನಿಗೆ ನಾನು ಚಾಲೆಂಜ್ ಮಾಡ್ತೀನಿ 2028ಕ್ಕೆ ನಾನು ಸಿಎಂ ಆಗುತ್ತೇನೆ ಎಂದು ಯತ್ನಾಳ್​ ಗುಡುಗಿದ್ದಾರೆ.
ಬಿಎಸ್ ಯಡಿಯೂರಪ್ಪ-ವಿಜಯೇಂದ್ರ-ಬಸನಗೌಡ ಪಾಟೀಲ್ ಯತ್ನಾಳ್
ಬಿಎಸ್ ಯಡಿಯೂರಪ್ಪ-ವಿಜಯೇಂದ್ರ-ಬಸನಗೌಡ ಪಾಟೀಲ್ ಯತ್ನಾಳ್
Updated on

ಬೆಂಗಳೂರು: ಶಿಸ್ತು ಉಲ್ಲಂಘನೆ ಮಾಡಿದ ಆರೋಪದ ಮೇಲೆ ತಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮತ್ತೊಮ್ಮೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಬಗ್ಗೆ ಮಾತನಾಡಿದ್ದಾರೆ. ನಾನು ಯಾರ ಕೈ ಕಾಲು ಹಿಡಿಯುವುದಿಲ್ಲ. ಬಿಜೆಪಿಗೆ ವಾಪಸ್ ಆಗೋದು ನನಗೆ ಗೊತ್ತಿದೆ. 2028ಕ್ಕೆ ಯಡಿಯೂರಪ್ಪ ಮಗ ವಿಜಯೇಂದ್ರನೇ ಸಿಎಂ ಆಗಬೇಕಾ? ಅವನಿಗೆ ನಾನು ಚಾಲೆಂಜ್ ಮಾಡ್ತೀನಿ 2028ಕ್ಕೆ ನಾನು ಸಿಎಂ ಆಗುತ್ತೇನೆ ಎಂದು ಯತ್ನಾಳ್​ ಗುಡುಗಿದ್ದಾರೆ.

ಸುದ್ದಿಸಂಸ್ಥೆ ಎಎನ್ಐ ಜೊತೆ ಮಾನಾಡಿದ ಯತ್ನಾಳ್, 'ರಾಜ್ಯದಲ್ಲಿ ಬಿಜೆಪಿಯನ್ನು ಕುಟುಂಬದ ಪಕ್ಷವನ್ನಾಗಿ ಮಾಡಿಕೊಂಡಿರುವ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಗನ ವಿರುದ್ಧ ನಾನು ಧ್ವನಿ ಎತ್ತುತ್ತೇನೆ. ಪ್ರಧಾನಿ ಮೋದಿ ಪ್ರತಿ ಸಾರ್ವಜನಿಕ ರ್ಯಾಲಿಯಲ್ಲಿ ಸ್ವಜನಪಕ್ಷಪಾತ, ಭ್ರಷ್ಟಾಚಾರ ಮತ್ತು 'ಹೊಂದಾಣಿಕೆ' ರಾಜಕೀಯವನ್ನು ಕೊನೆಗೊಳಿಸುವುದಾಗಿ ಯಾವಾಗಲೂ ಹೇಳುತ್ತಲೇ ಇದ್ದಾರೆ. ನಾನು ಕೂಡ ಅದಕ್ಕಾಗಿ ಧ್ವನಿ ಎತ್ತಿದ್ದೇನೆ ಮತ್ತು ನನ್ನನ್ನು ಪಕ್ಷದಿಂದ ಹೊರಹಾಕಲಾಗಿದೆ. ಪಕ್ಷದಲ್ಲಿ ಯಡಿಯೂರಪ್ಪ ಕುಟುಂಬದ ಪ್ರಭಾವದ ಬಗ್ಗೆ ನಾನು ಬಿಜೆಪಿ ನಾಯಕತ್ವವನ್ನು ಪ್ರಶ್ನಿಸಿದೆ. ಯಡಿಯೂರಪ್ಪ ಸಂಸದೀಯ ಮಂಡಳಿ ಸದಸ್ಯ, ಅವರ ಕಿರಿಯ ಮಗ ರಾಜ್ಯಾಧ್ಯಕ್ಷ ಮತ್ತು ಶಾಸಕ. ಇದು ವಂಶಪಾರಂಪರ್ಯ ರಾಜಕೀಯವಲ್ಲವೇ? ನಾನು ಈ ಪ್ರಶ್ನೆಯನ್ನು ಹೈಕಮಾಂಡ್‌ಗೆ ಕೇಳಿದೆ' ಎಂದರು.

'ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಶಿವಮೊಗ್ಗದಲ್ಲಿ ನಡೆದ ಗಲಭೆ ಸಮಯದಲ್ಲಿ ಹಿಂದೂಗಳನ್ನು ಬೆಂಬಲಿಸಲಿಲ್ಲ ಅಥವಾ ಹಿಂದೂ ಹಿತಾಸಕ್ತಿಗಳನ್ನು ರಕ್ಷಿಸಲಿಲ್ಲ. ಅವರ ಮಗ, ಸದ್ಯ ರಾಜ್ಯಾಧ್ಯಕ್ಷನಾಗಿದ್ದು ಅವರು ಕೂಡ ಎಂದಿಗೂ ಹಿಂದೂಗಳನ್ನು ಬೆಂಬಲಿಸಿಲ್ಲ. ಅದಕ್ಕಾಗಿಯೇ ನಾವು ಅವರ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇವೆ ಮತ್ತು ಅದಕ್ಕಾಗಿ ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ' ಎಂದು ಹೇಳಿದರು.

'ಮರಳಿ ಪಕ್ಷಕ್ಕೆ ಕರೆದುಕೊಳ್ಳುವಂತೆ ನಾನು ಯಾರನ್ನೂ ಬೇಡಿಕೊಳ್ಳುವುದಿಲ್ಲ. ನಾನು ಯಾವುದೇ ತಪ್ಪುಗಳನ್ನು ಮಾಡಿಲ್ಲ. ನಾವು ಪಕ್ಷಕ್ಕೆ ನಿಷ್ಠರಾಗಿದ್ದೇವೆ ಮತ್ತು ಅವರು ಕ್ಷಮೆಯಾಚಿಸಲು ಬಯಸಿದರೆ, ಕ್ಷಮೆ ಕೇಳಬೇಕಾದವರು ನಾನಲ್ಲ, ಬದಲಿಗೆ ಅವರೇ. ನಾನು ಯಾವಾಗಲೂ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್‌ಕೆ ಅಡ್ವಾಣಿಯಂತಹ ಬಿಜೆಪಿ ನಾಯಕರನ್ನು ಬೆಂಬಲಿಸಿದ್ದೇನೆ. ಪ್ರಧಾನಿ ಮೋದಿ ಒಳ್ಳೆಯ ನಾಯಕ, ಆದರೆ ಕೆಳ ಹಂತಗಳಲ್ಲಿ ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಅದು ಕರ್ನಾಟಕದಲ್ಲಿ ಪಕ್ಷಕ್ಕೆ ಹಾನಿ ಮಾಡುತ್ತದೆ' ಎಂದು ಯತ್ನಾಳ್ ಹೇಳಿದರು.

ಬಿಎಸ್ ಯಡಿಯೂರಪ್ಪ-ವಿಜಯೇಂದ್ರ-ಬಸನಗೌಡ ಪಾಟೀಲ್ ಯತ್ನಾಳ್
ಯತ್ನಾಳ್ ಉಚ್ಛಾಟನೆ ಹಿಂಪಡೆಯಿರಿ: ಹೈಕಮಾಂಡ್ ಗೆ BJP ಭಿನ್ನಮತೀಯರ ಎಚ್ಚರಿಕೆ!

'ನಾವು ಒಗ್ಗಟ್ಟಾಗಿದ್ದೇವೆ. ಕರ್ನಾಟಕದ ಹೆಚ್ಚಿನ ಸಂಸದರು ಮತ್ತು ಶಾಸಕರು ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಶೇ 75ರಷ್ಟು ಶಾಸಕರು ಸದ್ಯದ ನಾಯಕತ್ವದ ವಿರುದ್ಧ ಇದ್ದಾರೆ. ನಾವು ಪಕ್ಷವನ್ನು ಟೀಕಿಸುತ್ತಿಲ್ಲ, ನಾವು ಅದನ್ನು ವಂಶಪಾರಂಪರ್ಯ ರಾಜಕೀಯದಿಂದ ಮುಕ್ತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ನಾನು ಬಿಜೆಪಿಯನ್ನು ಎಂದಿಗೂ ಟೀಕಿಸಿಲ್ಲ. ಅದು ನಮ್ಮ ಪಕ್ಷ ಮತ್ತು ನಾವು ಅದನ್ನು ಅಗೌರವಿಸುವುದಿಲ್ಲ. ಆದರೆ, ಯಡಿಯೂರಪ್ಪ ಕುಟುಂಬವನ್ನು ಬೆಂಬಲಿಸುವವರು ತಮ್ಮ ಕಾರ್ಯಗಳಿಂದ ಪಕ್ಷಕ್ಕೆ ಹಾನಿ ಮಾಡುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಹೊಸ ಪಕ್ಷ ರಚನೆಯಾದರೆ, ನಾವು ಬಿಜೆಪಿಯನ್ನು ಬಲಪಡಿಸುತ್ತೇವೆ ಮತ್ತು ಅದರ ಮೂಲ ಮೌಲ್ಯಗಳನ್ನು ಮರಳಿ ತರುತ್ತೇವೆ' ಎಂದು ಅವರು ಹೇಳಿದರು.

'ನಾನು ಎಂದಿಗೂ ಕಾಂಗ್ರೆಸ್ ಅಥವಾ ಜೆಡಿಎಸ್ ಸೇರುವುದಿಲ್ಲ; ಬಿಜೆಪಿ ನನ್ನನ್ನು ಗೌರವದಿಂದ ವಾಪಸ್ ಕರೆದರೆ, ನಾನು ಬಿಜೆಪಿಯಲ್ಲಿಯೇ ಇರುತ್ತೇನೆ; ಇಲ್ಲದಿದ್ದರೆ, ವಿಜಯದಶಮಿಯಂದು ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ' ಎಂದು ಯತ್ನಾಳ್ ಹೇಳಿದರು. ಪಕ್ಷದ ಶಿಸ್ತನ್ನು ಪದೇ ಪದೆ ಉಲ್ಲಂಘಿಸಿದ್ದಕ್ಕಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬುಧವಾರ ಆರು ವರ್ಷ ಪಕ್ಷದಿಂದ ಉಚ್ಚಾಟಿಸಲಾಗಿದೆ ಎಂದು ಪಕ್ಷದ ಕೇಂದ್ರ ಶಿಸ್ತು ಸಮಿತಿ ನೀಡಿದ ಪತ್ರದಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com