ತಾವೇ ಸುಪ್ರೀಂ ಎಂಬಂತೆ ಮೋದಿ ವರ್ತನೆ; ತಿರಂಗಾ ಯಾತ್ರೆ ಬದಲು ಬಿಜೆಪಿ ಟ್ರಂಪ್ ಯಾತ್ರೆ ಮಾಡಲಿ: ಸಂತೋಷ್ ಲಾಡ್
ಬೆಂಗಳೂರು: ಪಾಕಿಸ್ತಾನ ಗೋಗರೆದ ಕಾರಣ ಕದನ ವಿರಾಮಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ತಮ್ಮ ಭಾಷಣದಲ್ಲಿ ಮೋದಿ ಹೇಳಿದ್ದಾರೆ. ಆದರೆ, ಅದಕ್ಕೂ ಮೊದಲು ಅಮೆರಿಕದ ಅಧ್ಯಕ್ಷ ಟ್ರಂಪ್ ಕದನ ವಿರಾಮ ಪ್ರಸ್ತಾಪಿಸಿದ್ದರು. ಅಮೆರಿಕ ಅಧ್ಯಕ್ಷರ ಮೂಲಕ ಕದನ ವಿರಾಮ ತಿಳಿದುಕೊಳ್ಳಬೇಕಾಯಿತು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟ್ರಂಪ್ ಹೇಳಿದ ಮಾದರಿಯಲ್ಲಿ ವ್ಯಾಪಾರಕ್ಕಾಗಿ ಯುದ್ಧ ನಿಲ್ಲಿಸಲಾಯಿತೇ ಎಂದು ಪ್ರಶ್ನಿಸಿದರು. ‘ಬಿಜೆಪಿಯವರು ತಿರಂಗಾ ಯಾತ್ರೆ ಮಾಡುತ್ತಿದ್ದಾರೆ. ಅವರು ತಿರಂಗಾ ಯಾತ್ರೆ ಬದಲು ಟ್ರಂಪ್ ಯಾತ್ರೆ ಮಾಡಲಿ’ ಎಂದರು.
ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವ ಆಧಾರದಲ್ಲಿ ಕದನ ವಿರಾಮ ಘೋಷಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ತಾವೇ ಸುಪ್ರೀಂ ಎಂಬಂತೆ ವರ್ತಿಸುತ್ತಿದ್ದಾರೆ. ಕದನ ವಿರಾಮದ ಬಳಿಕವೂ ಪಾಕಿಸ್ತಾನ ದಾಳಿ ನಡೆಸಿದೆ. ಸರ್ಕಾರಕ್ಕೆ ದೇಶದ ಜನತೆಯ ಬೆಂಬಲ ಇತ್ತು. ಪಾಕಿಸ್ತಾನಕ್ಕೆ ನುಗ್ಗಿ ಹೊಡೆಯಬೇಕು ಎಂಬ ನಿರೀಕ್ಷೆ ಇತ್ತು.
ಆದರೆ, ಯಾವ ಆಧಾರದಲ್ಲಿ ಕದನ ವಿರಾಮ ಘೋಷಿಸಿದ್ದಾರೆ. ಎಲ್ಲವೂ ನಿಮ್ಮದೇ ನಿರ್ಧಾರವೇ ಎಂದು ಪ್ರಧಾನಿಯನ್ನು ಪ್ರಶ್ನಿಸಿದರು. ದೇಶದಲ್ಲಿ ಯಾರೂ ಅಂತಿಮ ಅಲ್ಲ. ಬರುತ್ತಾರೆ, ಹೋಗುತ್ತಾರೆ. ಆದರೆ, ಅಂತಿಮವಲ್ಲ. ದೇಶವೇ ಅಂತಿಮ ಹೊರತು ವ್ಯಕ್ತಿಯಲ್ಲ ಎಂದರು.
ಕಳೆದ 20 ದಿನಗಳಿಂದ ದೇಶದಲ್ಲಿ ಏನಾಗಿದೆ ಎಂದು ಜನರಿಗೆ ಗೊತ್ತಿದೆ. ದೇಶವನ್ನು ಎಲ್ಲ ಸೇನಾ ಪಡೆಗಳು ಕಾಪಾಡಿವೆ. ಪಾಕಿಸ್ತಾನದ ಮೇಲೆ ದಾಳಿ ನಡೆಸುವಲ್ಲಿ ಯಶಸ್ವಿ ಆಗಿದ್ದೇವೆ. ಆದರೂ ಕೆಲವೊಂದು ಪ್ರಶ್ನೆಗಳು ಮೂಡುತ್ತಿವೆ. ಪ್ರತಿಯೊಂದು ವಿಚಾರಕ್ಕೂ ಪ್ರಧಾನಿ ಅವರೆನ್ನೇ ಸುಪ್ರೀಂ ಎಂಬಂತೆ ಬಿಂಬಿಸಲಾಗುತ್ತಿದೆ ಎಂದರು.
ಏಪ್ರಿಲ್ 22 ರಂದು ಪ್ರಧಾನಿ ನರೇಂದ್ರ ಮೋದಿ ಸೌದಿಯಿಂದ ವಾಪಸ್ ಬರ್ತಾರೆ. ಆದರೆ ಪತ್ರಿಕಾಗೋಷ್ಠಿ ನಡೆಸಲ್ಲ, ಬದಲಾಗಿ ಬಿಹಾರ ಚುನಾವಣಾ ಪ್ರಚಾರಕ್ಕೆ ಹೋಗ್ತಾರೆ. ಆಲ್ ಪಾರ್ಟಿ ಸಭೆಗೂ ಗೈರಾಗಿದ್ದಾರೆ. ನಾನು ಸುಪ್ರೀಂ, ಯಾವ ಸಭೆಗೆ ಭಾಗಿಯಾಗಲ್ಲ ಎಂಬ ಸಂದೇಶವೇ? ಯಾವ ಸಂದೇಶವನ್ನು ಪ್ರಧಾನಿ ಮೋದಿ ಕೊಡಲು ಹೊರಟಿದ್ದಾರೆ ಎಂದು ಪ್ರಶ್ನಿಸಿದರು.
ರೆಕಾರ್ಡ್ ಆಗಿರುವ ವಿಡಿಯೋವನ್ನು ಪ್ರಸಾರ ಮಾಡಲಾಗ್ತಿದೆ. ಅದನ್ನು ದೇಶದ ಜನರು ನೋಡಬೇಕಾದ ಸ್ಥಿತಿ ಇದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೋದಿ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಅವರು ಸಂಸತ್ತಿಗೂ ಬರುತ್ತಿಲ್ಲ. ಸರ್ವಪಕ್ಷ ಸಭೆಗೂ ಬರುತ್ತಿಲ್ಲ. ದೇಶದ 140 ಕೋಟಿ ಜನ ಯುದ್ಧ ಮಾಡಬೇಕೆಂಬ ನಿರೀಕ್ಷೆ ಹೊಂದಿದ್ದರು. ಯಾಕೆ ಯುದ್ಧ ಆಗಬಾರದು, ಮಾಡಬೇಕಿತ್ತು. ದೇಶದ ಜನರು ಇದನ್ನೇ ಬಯಸಿದ್ದರು. ಆದರೆ, ರಾತ್ರೋರಾತ್ರಿ ಕದನ ವಿರಾಮ ಘೋಷಿಸುತ್ತಾರೆ. ಯಾವ ಕಾರಣಕ್ಕಾಗಿ ಕದನ ವಿರಾಮ ಮಾಡಿದ್ದೀರಿ? ಈ ಪ್ರಶ್ನೆಗೆ ಪ್ರಧಾನಿ ಮೋದಿ ಉತ್ತರ ಕೊಡಬೇಕು ಎಂದರು.