
ಕೊಪ್ಪಳ: ರಾಜ್ಯದ ಕಾಂಗ್ರೆಸ್ ಸರ್ಕಾರ ಯಶಸ್ವಿಯಾಗಿ ಎರಡು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮೇ 20 ರಂದು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಆಯೋಜಿಸಲಾಗಿರುವ ಸಾಧನಾ ಸಮಾವೇಶದಲ್ಲಿ ಸುಮಾರು ಮೂರು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಈ ಸಮಾವೇಶದಲ್ಲಿ, "ದಾಖಲೆರಹಿತ ವಾಸಸ್ಥಳಗಳನ್ನು" ಕಂದಾಯ ಗ್ರಾಮಗಳೆಂದು ಘೋಷಿಸಲಾದ ಅರ್ಹ ಫಲಾನುಭವಿಗಳಿಗೆ ಒಂದು ಲಕ್ಷ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಮತ್ತು ವಿವಿಧ ಇಲಾಖೆಗಳಿಂದ ಕಾರ್ಯಕ್ರಮಗಳು ಸಹ ಇರುತ್ತವೆ ಎಂದು ಹೇಳಿದರು.
"ಕಳೆದ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ತಿಳಿಸಲು ನಾವು ಪ್ರಯತ್ನಿಸುತ್ತೇವೆ" ಎಂದು ಸಿಎಂ ತಿಳಿಸಿದರು.
ಬೆಂಗಳೂರು ನಗರವನ್ನು ನಿರ್ವಹಿಸಲು ಏಳು ಮಹಾನಗರ ಪಾಲಿಕೆಗಳನ್ನು ರಚಿಸಲು ಅವಕಾಶ ನೀಡುವ ಮತ್ತು ಮೇ 15 ರಂದು ಜಾರಿಗೆ ಬಂದ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯ ಬಗ್ಗೆ ವಿರೋಧ ಪಕ್ಷ ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬೆಂಗಳೂರು ವಿಭಜನೆ ಮಾಡುವ ಯೋಜನೆ ರೂಪಿಸಿದ್ದೇ ಬಿಜೆಪಿ. 1.5 ಕೋಟಿ ಜನಸಂಖ್ಯೆ ಇರುವ ಬೆಂಗಳೂರಿಗೆ ಒಂದೇ ಮಹಾನಗರ ಪಾಲಿಕೆಯಡಿ ನಿರ್ವಹಣೆ ಮಾಡುವುದು ಕಷ್ಟ. ಹೀಗಾಗಿ ವಿಭಜನೆ ಮಾಡಲಾಗುವುದು. ಆಡಳಿತಾತ್ಮಕ ದೃಷ್ಟಿಯಿಂದ ಮೂರು ಅಥವಾ ಹೆಚ್ಚು ಭಾಗವಾಗಿ ವಿಭಾಗಿಸಲಾಗುವುದು" ಎಂದು ಸಿಎಂ ಹೇಳಿದರು.
ಇನ್ನು ಗಂಗಾವತಿ ಉಪಚುನಾವಣೆ ಯಾವಾಗ ನಡೆದರೂ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಓಬಳಾಪುರಂ ಮೈನಿಂಗ್ ಕಂಪನಿ(ಒಎಂಸಿ)ಯ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯವು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ ನಂತರ, ಕರ್ನಾಟಕ ವಿಧಾನಸಭೆಯ ಸದಸ್ಯ ಸ್ಥಾನದಿಂದ ಅನರ್ಹಗೊಂಡಿದ್ದಾರೆ.
"ಚುನಾವಣಾ ಆಯೋಗ ಗಂಗಾವತಿ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಿಸಿದಲ್ಲಿ ನಾವು ಗೆಲ್ಲುತ್ತೇವೆ. ಯಾರು ಅಭ್ಯರ್ಥಿ ಎಂದು ಪಕ್ಷ ತೀರ್ಮಾನಿಸಲಿದೆ. ನಾನು ಹಿಂದೆ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಮಾಡಿದ್ದೆ. ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಿಸಲಾಗುವುದೆಂದು ಹೇಳಿದ್ದೆ. ಅದರಂತೆ ಕೋರ್ಟ್ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿಗೆ ನಾನು ಬೆಂಬಲಿಸಿದ್ದೆ ಎಂಬುದು ಸುಳ್ಳು. ನಾನು 50 ವರ್ಷದ ರಾಜಕೀಯ ಜೀವನದಲ್ಲಿ ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ವಿರೋಧಿಸಿದಷ್ಟು ಬೇರೆ ಯಾರನ್ನೂ ವಿರೋಧಿಸಿಲ್ಲ. ಬಿಜೆಪಿಯಲ್ಲಿರುವ ರೆಡ್ಡಿಯನ್ನು ಬೆಂಬಲಿಸುವ ಅಗತ್ಯವಿಲ್ಲ" ಎಂದರು.
ಇದೇ ವೇಳೆ ತಮ್ಮ ಸರ್ಕಾರದ ಐದು ಖಾತರಿ ಯೋಜನೆಗಳಿಗೆ(ಗೃಹ ಲಕ್ಷ್ಮಿ, ಶಕ್ತಿ, ಗೃಹ ಜ್ಯೋತಿ, ಅನ್ನ ಭಾಗ್ಯ ಮತ್ತು ಯುವ ನಿಧಿ) ಯಾವುದೇ ಹಣದ ಕೊರತೆಯಿಲ್ಲ ಎಂದು ಸ್ಪಷ್ಟಪಡಿಸಿದ ಸಿದ್ದರಾಮಯ್ಯ, “ಕಳೆದ ವರ್ಷ, ನಾನು ಇದಕ್ಕಾಗಿ ಬಜೆಟ್‌ನಲ್ಲಿ 52,009 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದೆ ಮತ್ತು ಈ ವರ್ಷ, 50,018 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದೇನೆ. ಹಣದ ಕೊರತೆಯಿಲ್ಲ ಎಂದರು.
Advertisement