
ಮೈಸೂರು: ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಶನಿವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಪ್ರಧಾನಿ ಮೋದಿ ಬಗ್ಗೆ ಮಾತನಾಡದೇ ಇದ್ದರೆ ಲಾಡ್‌ಗೆ ತಿಂದಿದ್ದು ಜೀರ್ಣ ಆಗಲ್ಲ. ಮರಾಠ ಸಮುದಾಯದ ಸಂತೋಷ್ ಲಾಡ್ ಬಾಯಲ್ಲಿ ಶಿವಾಜಿ ರೀತಿಯ ಮಾತು ಬರುತ್ತಿಲ್ಲ. ಅಬ್ದುಲ್ ಖಾನ್ ರೀತಿಯ ಮಾತು ಬರುತ್ತಿದೆ. ಸಂತೋಷ್ ಲಾಡ್ ಒಬ್ಬ ತಿಳಿಗೇಡಿ ಎಂದರು.
ನೇಹಾ ಹತ್ಯೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದರೆ ಮೋದಿಯನ್ನು ಕೇಳ್ರಿ ಅಂತಾರೆ?, ಹತ್ಯೆ ಮಾಡಿದವನ ಎನ್ ಕೌಂಟರ್ ಗೆ ಮೋದಿ ಅನುಮತಿ ಏಕೆ ಬೇಕು ಲಾಡ್? ಒಂದು ವರ್ಷವಾಯ್ತು, ನೇಹಾಗೆ ನ್ಯಾಯ ಕೊಡಿಸಿದ್ರಾ? ಎಂದು ಟೀಕಾ ಪ್ರಹಾರ ನಡೆಸಿದರು.
1971ರಲ್ಲಿ ಇಂದಿರಾ ಗಾಂಧಿ ಏನ್ ಕಡಿದು ಕಟ್ಟೆ ಹಾಕಿದ್ರು? ಅವತ್ತಿನ ಯುದ್ಧದ ಗೆಲುವನ್ನು ಹಾಳು ಮಾಡಿದ್ದೇ ಇಂದಿರಾ ಗಾಂಧಿ ಎಂಬುದು ನೆನಪಿರಲಿ. ಕಾಶ್ಮೀರದಿಂದ ಕನ್ನಡಿಗರನ್ನು ಕರೆತರಲು ಅವಕಾಶ ಕಲ್ಪಿಸಿದ್ದು, ಮೋದಿ .ಅದರಲ್ಲಿ ನಿಮ್ಮ ಸಾಧನೆ ಏನಿದೆ? ನಿಮ್ಮ ಅನಿಷ್ಟಕ್ಕೆಲ್ಲ ಮೋದಿ ಕಾರಣ ಎಂಬಂತೆ ಯಾಕೆ ಮಾತನಾಡುತ್ತೀರಿ ಎಂದು ಪ್ರಶ್ನಿಸಿದರು.
ಮೈ ತುಂಬಾ ಗಣಿಗಾರಿಕೆ ದುಡ್ಡಿನ ಮದ: ಸಂತೋಷ್ ಲಾಡ್ ಗೆ ಮೈ ತುಂಬಾ ಗಣಿಗಾರಿಕೆ ದುಡ್ಡಿನ ಮದ ತುಂಬಿದೆ. ಹೊರಗಡೆ ಮಾತ್ರ ತಾನು ಬಹಳ ಸಾಚಾ ಅಂತ ಬಿಲ್ಡಪ್ ಕೊಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಅಕ್ರಮದ ಆರೋಪ ಕೇಳಿ ಬಂದಿದ್ದರಿಂದ ಕಾರ್ಮಿಕ ಕಿಟ್ ಹಗರಣದಿಂದ ಬಚಾವ್ ಆಗಿದ್ದರೆ, ಇಲ್ಲದಿದ್ದರೆ ರಾಜೀನಾಮೆ ಕೊಡಬೇಕಾಗಿತ್ತು ಎಂದು ಕಿಡಿಕಾರಿದರು.
ಪಾಕಿಸ್ತಾನವೇ ತನ್ನ ಮೇಲೆ ದಾಳಿ ಆಗಿರುವುದಕ್ಕೆ ಸಾಕ್ಷಿ ಕೊಟ್ಟಿದೆ. ಆದರೂ ಭಾರತದಲ್ಲಿ ಕೆಲವರ ತಕರಾರು ನಿಲ್ಲುತ್ತಿಲ್ಲ. ಕಾಂಗ್ರೆಸ್ ನವರಿಗೆ ಪಾಕಿಸ್ತಾನ ಕಂಡ್ರೆ ಪ್ರೀತಿ ಜಾಸ್ತಿ ಎಂದು ಆರೋಪಿಸಿದರು.
Advertisement