
ಮೈಸೂರು: ಇತ್ತೀಚೆಗೆ ನಡೆದ ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೈರಾಗಿರುವುದು ರಾಜ್ಯಕ್ಕೆ ಹಾಗೂ ನಾಡಿನ ಸಮಸ್ತ ಕನ್ನಡಿಗರಿಗೆ ಅಪಮಾನ ಎಸಗಿದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟೀಕಿಸಿದ್ದಾರೆ.
ಇಲ್ಲಿನ ಕಲಾಮಂದಿರದಲ್ಲಿ ಭಾನುವಾರ ನಡೆದ ಬಸವ ಜಯಂತಿ ಆಚರಣೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ವಿಜಯೇಂದ್ರ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡಾ ಭಾಗವಹಿಸಿದ್ದರೂ ಇಂತಹ ಮಹತ್ವದ ಸಭೆಗೆ ಗೈರು ಹಾಜರಾಗುವ ಮೂಲಕ ಮುಖ್ಯಮಂತ್ರಿಗಳು ರಾಜ್ಯವನ್ನು ನಿರಾಸೆಗೊಳಿಸಿದ್ದಾರೆ ಎಂದು ಆರೋಪಿಸಿದರು.
ನಮ್ಮ ಮುಖ್ಯಮಂತ್ರಿ ನೀತಿ ಆಯೋಗದ ಸಭೆಯನ್ನು ಏಕೆ ಬಹಿಷ್ಕರಿಸಿದರು? ಎಂದು ಪ್ರಶ್ನಿಸಿದ ವಿಜಯೇಂದ್ರ, ಕೇಂದ್ರ ಸರ್ಕಾರದ ವಿರುದ್ಧ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಯಲ್ಲಿ ಭಾಗವಹಿಸಲು ಸಮಯ ಇರುವ ಮುಖ್ಯಮಂತ್ರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆದ ಸಭೆಗೆ ಗೈರಾಗುತ್ತಾರೆ. ಇದು ಸ್ಪಷ್ಟವಾಗಿ ರಾಜಕೀಯವಾಗಿದೆ ಎಂದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದಲೂ ನಿರಂತರವಾಗಿ ಕೇಂದ್ರದ ವಿರುದ್ಧ ಸಂಘರ್ಷದ ನಿಲುವು ತಳೆಯುತ್ತಿದ್ದಾರೆ. ಇಂತಹ ಕ್ರಮಗಳು ಕರ್ನಾಟಕದ ಹಿತದೃಷ್ಟಿಯಿಂದ ಒಳ್ಳೇಯದಲ್ಲಾ ಎಂದು ಎಚ್ಚರಿಸಿದರು.
ಜನೌಷಧಿ ಕೇಂದ್ರಗಳ ಮುಚ್ಚುವಿಕೆ: ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳನ್ನು (ಪಿಎಂಬಿಜೆಕೆ) ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿಜಯೇಂದ್ರ ಖಂಡಿಸಿದರು.
ಬಡವರಿಗೆ ಕೈಗೆಟಕುವ ದರದಲ್ಲಿ ಔಷಧಗಳನ್ನು ನೀಡುವ ಉದ್ದೇಶದಿಂದ ರೋಗಿಗಳಿಗೆ ಬೆಲೆ ಬಾಳುವ ಔಷಧಗಳನ್ನು ಹೊರಗಿನಿಂದ ಖರೀದಿಸುವಂತೆ ಹೇಳಲಾಗುತ್ತಿದೆ. ಸರ್ಕಾರ ವೈದ್ಯಕೀಯ ಮಾಫಿಯಾ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಕ್ರಮವು ಬಡ ರೋಗಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಮುಖ್ಯಮಂತ್ರಿಗಳು ಸ್ವತಃ ಆಸ್ಪತ್ರೆಗಳಿಗೆ ಭೇಟಿ ನೀಡಿ ಔಷಧಗಳ ಕೊರತೆಯನ್ನು ನೋಡಬೇಕು ಎಂದು ಒತ್ತಾಯಿಸಿದರು.
ಅಭಿವೃದ್ಧಿಗೆ ಹಣದ ಕೊರತೆ: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಶಾಸಕರಿಗೆ ಸಾಕಷ್ಟು ಅಭಿವೃದ್ಧಿ ಹಣವನ್ನು ಮಂಜೂರು ಮಾಡುವಲ್ಲಿ ವಿಫಲವಾಗುತ್ತಿದ್ದು, ಅವರ ಪಕ್ಷದಲ್ಲಿಯೇ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಕಿಡಿಕಾರಿದರು.ಅನುದಾನ ಸಿಗದ ಕಾರಣ ಶಾಸಕ ರಾಜು ಕಾಗೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ವ್ಯಕ್ತಪಡಿಸಿದ್ದು, ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದು ಸರ್ಕಾರದ ಅಸಮರ್ಥತೆಯನ್ನು ತೋರಿಸುತ್ತದೆ. ಕುಂಠಿತಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಂದ ಶಾಸಕರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು
Advertisement