
ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್ ನ ಎಂಎಲ್‌ಸಿಗಳ ನಿಯೋಗ ಗುರುವಾರ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ, ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಮತ್ತು ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಅವರ ವಿರುದ್ಧ ದೂರು ನೀಡಿದ್ದು, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಅವರ ವಿರುದ್ಧ ರವಿಕುಮಾರ್ ನೀಡಿದ ಹೇಳಿಕೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಫೌಜಿಯಾ ಅವರು ಐಎಎಸ್ ಅಧಿಕಾರಿಯೋ ಅಥವಾ "ಪಾಕಿಸ್ತಾನದಿಂದ ಬಂದವರೋ" ಎಂದು ರವಿಕುಮಾರ್ ಹೇಳಿದ್ದು, ಇದು ವ್ಯಾಪಕ ಖಂಡನೆಗೆ ಕಾರಣವಾಗಿದೆ.
ಇನ್ನು ಇತ್ತೀಚೆಗೆ ಛಲವಾದಿ ನಾರಾಯಣಸ್ವಾಮಿ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಸಿದ್ದರು.
ವಿಧಾನ ಪರಿಷತ್‌ನ ಆಡಳಿತ ಪಕ್ಷದ ನಾಯಕರಾದ ಎನ್.ಎಸ್.ಭೋಸರಾಜು ಹಾಗೂ ವಿಧಾನ ಪರಿಷತ್ತಿನ ಮುಖ್ಯ ಸಚೇತಕರಾದ ಸಲೀಂ ಅಹ್ಮದ್ ಅವರ ನೇತೃತ್ವದ ನಿಯೋಗ ಇಂದು ರಾಜ್ಯಪಾಲರನ್ನು ಭೇಟಿ ಮಾಡಿ, ಈ ಇಬ್ಬರು ಬಿಜೆಪಿ ಎಂಎಲ್ ಸಿಗಳ ವಿರುದ್ಧ ದೂರು ನೀಡಿದೆ.
ರಾಜ್ಯಪಾಲರ ಭೇಟಿಯ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಬೋಸರಾಜು, "ಅವರ(ನಾರಾಯಣಸ್ವಾಮಿ ಮತ್ತು ರವಿಕುಮಾರ್) ನಡವಳಿಕೆ ತಪ್ಪು ಮತ್ತು ಅವರು ಹೊಂದಿರುವ ಹುದ್ದೆಗಳಿಗೆ ಸೂಕ್ತವಲ್ಲ. ಇಬ್ಬರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ನಾವು ರಾಜ್ಯಪಾಲರನ್ನು ಒತ್ತಾಯಿಸಿದ್ದೇವೆ. ಪ್ರಜಾಪ್ರಭುತ್ವದಲ್ಲಿ ಯಾರೂ ಅಂತಹ ರೀತಿಯ ಹೇಳಿಕೆ ನೀಡಬಾರದು ಎಂದು ರಾಜ್ಯಪಾಲರು ಕೂಡ ಹೇಳಿದ್ದಾರೆ" ಎಂದರು.
ಶೀಘ್ರದಲ್ಲೇ ವಿಧಾನ ಪರಿಷತ್ತಿನ ಅಧ್ಯಕ್ಷರಿಗೆ ಇದೇ ರೀತಿಯ ದೂರು ನೀಡುವುದಾಗಿ ಹೇಳಿದ ಅವರು, "ಅವರು ತಮ್ಮ ಸ್ಥಾನಗಳಲ್ಲಿ ಮುಂದುವರಿಯಬಾರದು... ಅವರು(ರವಿಕುಮಾರ್) ಮಹಿಳಾ ಐಎಎಸ್ ಅಧಿಕಾರಿಯ ವಿರುದ್ಧ ಮಾತನಾಡಿದ್ದಾರೆ. ಯಾವುದೇ ಬಿಜೆಪಿ ನಾಯಕರು ತಮ್ಮ ಪಕ್ಷದ ಸಹೋದ್ಯೋಗಿಯ ಹೇಳಿಕೆಯ ಬಗ್ಗೆ ಪ್ರತಿಕ್ರಿಯಿಸುತ್ತಿಲ್ಲ" ಎಂದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎನ್ನುವ ಬಿಜೆಪಿ ಸದಸ್ಯರು ಸಮಾಜವನ್ನು ಹೊಡೆಯುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುವುದನ್ನು ಹವ್ಯಾಸವನ್ನಾಗಿಸಿಕೊಂಡಿದ್ದಾರೆ. ದಲಿತ ಸಮುದಾಯವನ್ನು ಹೀಗೆಳೆಯುವಂತಹ ಹೇಳಿಕೆ ನೀಡಿರುವ ಛಲವಾದಿ ನಾರಾಯಣ ಸ್ವಾಮಿ ಅವರನ್ನು ಉಚ್ಚಾಟನೆ ಮಾಡಬೇಕು. ಹಾಗೆಯೇ, ಅಧಿಕಾರಿಯ ಬಗ್ಗೆ ಹೇಳಿಕೆ ನೀಡಿರುವ ರವಿಕುಮಾರ್ ಅವರ ವಿರುದ್ದ ಕಾನೂನಾತ್ಮಕವಾಗಿ ಹಾಗೂ ಸಂವಿಧಾನಾತ್ಮಕವಾದ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
Advertisement