
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮು ವೈಷ್ಯಮದ ಪ್ರಕರಣಗಳನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕರಾವಳಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದರೂ ಅದರ ಬಗ್ಗೆ ಚಿಂತೆ ಇಲ್ಲ, ಕೊಲೆಗಳ ಬಗ್ಗೆ ಸರ್ಕಾರ ಎಲ್ಲಿಲ್ಲದ ಕಾಳಜಿ ತೋರಿಸುತ್ತಿದೆ, ಸರ್ವ ಜನಾಂಗದ ಶಾಂತಿಯ ತೋಟವನ್ನು ವಿಷ ಸರ್ಪಗಳ ತೋಟವನ್ನಾಗಿ ಪರಿವರ್ತಿಸಿದ್ದೀರಿ ಎಂದು ಕಿಡಿ ಕಾರಿದ್ದಾರೆ.
ಕರಾವಳಿ ಭಾಗ ಸೇರಿ ರಾಜ್ಯದ ಉದ್ದಗಲಕ್ಕೂ ನಿರಂತರ ಧಾರಾಕಾರ ಮಳೆ ಜನಜೀವನವನ್ನು ಛಿದ್ರಗೊಳಿಸಿದೆ. ಜನ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಜವಾಬ್ದಾರಿಯುತವಾಗಿ ವರ್ತಿಸಬೇಕಿದ್ದ ರಾಜ್ಯ ಸರಕಾರ, ಕರಾವಳಿಗರ ಕಣ್ಣೀರು ಒರೆಸುವ ಬದಲು ಅವರ ಕಣ್ಣಲ್ಲಿ 'ರಕ್ತಕಣ್ಣೀರು' ಸುರಿಯಲಿ ಎಂದು ಹಪಾಹಪಿಸುತ್ತಿದೆ ಎಂದು ಟೀಕಿಸಿದ್ದಾರೆ.
ಮನೆ, ರಸ್ತೆ, ಸೇತುವೆಗಳು ಕುಸಿದಿವೆ. ನಗರ, ಪಟ್ಟಣ, ಹಳ್ಳಿಗಳು ಜಲದಿಗ್ಬಂಧನಕ್ಕೆ ಸಿಲುಕಿ ಜನ ವಿಲವಿಲವೆನ್ನುತ್ತಿದ್ದಾರೆ. ಮೂರಾಬಟ್ಟೆಯಾಗಿರುವ ಅವರ ಬದುಕಿನ ರಕ್ಷಣೆಗೆ ಸರಕಾರದ ಕ್ರಮವೇನು ಎಂದು ಪ್ರಶ್ನಿಸಿದ್ದಾರೆ.
ಕೋಟೆ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಬಡಿದುಕೊಂಡರು' ಎನ್ನುವಂತೆ ಮಳೆಯಲ್ಲಿ ಬದುಕು ಕೊಚ್ಚಿಹೋದ ಮೇಲೆ ಸಚಿವರಿಗೆ ಹೋಗಿ ಎಂದು ಮುಖ್ಯಮಂತ್ರಿ ಅಪ್ಪಣೆ ಕೊಟ್ಟರೆ ಫಲವೇನು? ಮಳೆ ಬರುವ ಮೊದಲು ಏನು ಮಾಡಿದ್ದೀರಿ? ಇದೇನಾ ಜನಪರ ಆಡಳಿತ? ನುಡಿದಂತೆ ನಡೆಯುವುದು ಎಂದರೆ ಹೀಗೆನಾ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಕರಾವಳಿ ಮಳೆ ಬಗ್ಗೆ ಚಿಂತೆ ಇಲ್ಲ. ಆದರೆ, ಕರಾವಳಿ ಕೊಲೆಗಳ ಬಗ್ಗೆ ಎಲ್ಲಿಲ್ಲದ ಕಾಳಜಿ. ಆ ಕಾಳಜಿ ಕೊಲೆಗಳನ್ನು ಹತ್ತಿಕ್ಕಲಿಕ್ಕಲ್ಲ, ಕೊಲೆಗಳಲ್ಲೂ 'ರಾಜಕೀಯ ಕೂಳು' ಬೇಯಿಸಿಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮ್ಯನನವರೇ, ಎರಡು ವರ್ಷದಿಂದ ಅಧಿಕಾರದಲ್ಲಿದ್ದೀರಿ. ಅನ್ಯಪಕ್ಷಗಳನ್ನು ದೂರುತ್ತಾ ಕಾಲಹರಣ ಮಾಡುತ್ತಿದ್ದೀರಿ. ನೀವು ಅಧಿಕಾರಕ್ಕೆ ಬಂದ ಮೇಲೆ ಕರಾವಳಿ ಭಾಗದಲ್ಲಿ ಎಷ್ಟು ಹತ್ಯೆಗಳಾದವು? ಅವನ್ನು ಹತ್ತಿಕ್ಕಲಿಲ್ಲ ಯಾಕೆ? ಒಂದು ಸಮುದಾಯ ನಿಮ್ಮ ಪಕ್ಷಕ್ಕೆ ನೂರಕ್ಕೆ ನೂರರಷ್ಟು ವೋಟು ಕೊಟ್ಟಿದೆಯಲ್ಲವೇ? ಅವರನ್ನು ರಕ್ಷಿಸಲು ವಿಫಲರಾಗಿರುವ ನೀವು, ಇತರೆ ಕೋಮುಗಳ ಮೇಲೆ ವಿಷ ಕಕ್ಕುತ್ತಿದ್ದೀರಿ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರೇ, ನೀವೂ ಮತ್ತು ನಿಮ್ಮ ಸಂಗಡಿಗರ ಸದಾರಮೆ ಸಾಕು. ಕೂಡಲೇ ಕರಾವಳಿಗೆ ಭೇಟಿ ನೀಡಿ. ಮಳೆ, ಕೊಲೆಗಳಿಂದ ತತ್ತರಿಸಿರುವ ಅಲ್ಲಿನ ಜನತೆಗೆ ಧೈರ್ಯ ತುಂಬಿ. ಪ್ರಕೃತಿ ಪ್ರೇರಿತ ಮಳೆ ವಿಕೋಪ, ನಿಮ್ಮ ಪಕ್ಷ ಪ್ರೇಷಿತ 'ಕೊಲೆ ವಿಕೋಪ'ಕ್ಕೆ ಪರಿಹಾರ ಕಂಡುಕೊಳ್ಳಿ. ಮುಖ್ಯಮಂತ್ರಿಯಾಗಿ ಇದು ನಿಮ್ಮ ತಕ್ಷಣದ ಕರ್ತವ್ಯ ಎಂದು ಬರೆದುಕೊಂಡಿದ್ದಾರೆ.
Advertisement