'ನಿಮ್ಮ ಬೇಡಿಕೆಗೆ ಹೈಕಮಾಂಡ್ ಯಾಕೆ ಸೊಪ್ಪು ಹಾಕುತ್ತಿಲ್ಲ? Outgoing CM ಎಂಬುದಕ್ಕೆ ಪರೋಕ್ಷ ಸೂಚನೆಯೋ?'

ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ ತಮ್ಮ ಕೋಪ-ತಾಪ, ರೋಷಾವೇಷ ಅಧಿಕಾರಿಗಳ ಮೇಲಲ್ಲ, ಸಚಿವ ಸಂಪುಟದ ಸದಸ್ಯರ ಮೇಲೆ ತೋರಿಸಿ.
R.Ashok
ಆರ್. ಅಶೋಕ್
Updated on

ಬೆಂಗಳೂರು: Outgoing ಸಿಎಂ ಸಿದ್ದರಾಮಯ್ಯ ಅವರು ಡಿಸಿ, ಸಿಇಒ ಗಳ ಸಭೆಯಲ್ಲಿ ಅಧಿಕಾರಿಗಳಿಗೆ ತಮ್ಮ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಯಂತ್ರ ಹೇಗೆ ಸಂಪೂರ್ಣವಾಗಿ ಹಳಿ ತಪ್ಪಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ ತಮ್ಮ ಕೋಪ-ತಾಪ, ರೋಷಾವೇಷ ಅಧಿಕಾರಿಗಳ ಮೇಲಲ್ಲ, ಸಚಿವ ಸಂಪುಟದ ಸದಸ್ಯರ ಮೇಲೆ ತೋರಿಸಿ. ನಿಮ್ಮ ಹತಾಶೆಯನ್ನು, ಅಸಹಾಯಕತೆಯನ್ನ ಅಧಿಕಾರಿಗಳ ಮೇಲಲ್ಲಾ ತಮ್ಮ ಮಾತಿಗೆ ನಯಾ ಪೈಸೆ ಬೆಲೆ ಕೊಡದ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಕ್ಲಾಸ್ ತೆಗೆದುಕೊಂಡು ನಿಮ್ಮ ದಮ್ಮು ತಾಕತ್ತು ತೋರಿಸಿ ಎಂದು ಸವಾಲು ಹಾಕಿದ್ದಾರೆ.

ತಾವು ಸಚಿವರಿಗೆ ನೀಡಿರುವ ನಿರ್ದೇಶಗಳಲ್ಲಿ ಯಾವುದಾದರೂ ಒಂದಾದರೂ ಪಾಲನೆ ಆಗುತ್ತಿದೆಯಾ? ತಿಂಗಳಲ್ಲಿ ಒಂದು ದಿನ ಜನತಾದರ್ಶನ ಮಾಡಿ ಎಂದರೂ ಮಾಡುತ್ತಿಲ್ಲ. ಜಿಲ್ಲಾ ಪ್ರವಾಸ ಮಾಡಿ ಜನರ ಸಮಸ್ಯೆ ಕೇಳಿ ಎಂದರೂ ಮಾಡುತ್ತಿಲ್ಲ. ಕನಿಷ್ಟಪಕ್ಷ ವಾರದಲ್ಲಿ ಮೂರು ದಿನ ಕಚೇರಿಯಲ್ಲಿ ಕುಳಿತು ಕೆಲಸ ಮಾಡಿ ಎಂದರೂ ಗುರುವಾರದ ಸಂಪುಟ ಸಭೆಗೆ ಬಿಟ್ಟರೆ ಬಹುತೇಕ ಸಚಿವರು ವಿಧಾನಸೌಧದತ್ತ ತಲೆಯೂ ಹಾಕುತ್ತಿಲ್ಲ. ನಿವೃತ್ತ ಅಧಿಕಾರಿಗಳನ್ನು ಹೊರ ಗುತ್ತಿಗೆ ಸೇವೆಯಿಂದ ತಕ್ಷಣ ಬಿಡುಗಡೆ ಮಾಡಿ ಎಂದರೂ ಬಿಡುಗಡೆ ಮಾಡಲಿಲ್ಲ.

ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ತಕ್ಷಣ ಪರಿಹಾರ ನೀಡಿ ಎಂದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಕಳೆದ ವರ್ಷದ ಪರಿಹಾರ ವಿತರಣೆಯೇ ಬಾಕಿ ಇದೆ. ಕೆರೆ ಒತ್ತುವರಿ ನಿರ್ದಾಕ್ಷಿಣ್ಯವಾಗಿ ತೆರವು ಮಾಡಿಸಿ ಎಂದು ಅಧಿಕಾರ ವಹಿಸಿಕೊಂಡ ಆರಂಭದಲ್ಲಿ ಹೇಳಿದ್ದನ್ನು ಯಾರೂ ಕೇರ್ ಮಾಡಿಲ್ಲ. ರಾಜಕಾಲುವೆ ಅಕ್ರಮ ಒತ್ತುವರಿ ತೆರವು ಮಾಡಿ ಎಂದು ನಗರ ಪ್ರದಕ್ಷಿಣೆ ಹಾಕಿ ಬಂದರೂ ಯಾರೂ ಕ್ಯಾರೆ ಅನ್ನುತ್ತಿಲ್ಲ. ಜನಸ್ಪಂದನ ಅರ್ಜಿ ವಿಲೇವಾರಿ ತ್ವರಿತವಾಗಿ ಆಗಬೇಕು ಎಂಬ ಸೂಚನೆ ಭಾಷಣಕ್ಕೆ ಸೀಮಿತವಾಯಿತು ಎಂದಿದ್ದಾರೆ.

R.Ashok
ರಾಜ್ಯದಲ್ಲಿ ಬಾಲ್ಯವಿವಾಹ ಹೆಚ್ಚಳವಾಗಿರುವುದು ಗಮನಕ್ಕೆ ಬಂದಿದೆಯೇ; ಕಡಿವಾಣ ಹಾಕಲು ನಿಮಗೆ ದಕ್ಷತೆ ಇಲ್ಲವೇ?: ಅಧಿಕಾರಿಗಳಿಗೆ ಸಿಎಂ ಪ್ರಶ್ನೆ

ಮೈಕ್ರೋಫೈನಾನ್ಸ್ ದೌರ್ಜನ್ಯ ಪ್ರಕರಣಗಳ ಬಗ್ಗೆ ಕೆಡಿಪಿ ಸಭೆಗಳಲ್ಲಿ ಪರಿಶೀಲನೆ ನಡೆಸಿ ಎಂದರೂ ತಮ್ಮ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ನಿಮ್ಮ ಗಮನಕ್ಕೆ ಬಂದಿದೆಯೇ ಇಲ್ಲವೋ ಗೊತ್ತಿಲ್ಲ, ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ನಿನ್ನೆಯೂ ಕೊಡಗಿನಲ್ಲಿ ಒಂದು ಆತ್ಮಹತ್ಯೆ ಆಗಿದೆ. ಡಿಸಿಎಂ ಸಾಹೇಬರು ನೋಡಿದರೆ ತಾವು ಮಾಡಿದ ಎಂಜಿನಿಯರ್ ಗಳ ವರ್ಗಾವಣೆ ಆದೇಶಕ್ಕೆ ಸಡ್ಡು ಹೊಡೆದು ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದು ತಮ್ಮ ಅನುಮತಿ ಇಲ್ಲದೆ ಮಾಡುವಂತಿಲ್ಲ ಎಂದು ಧಮ್ಕಿ ಹಾಕುತ್ತಾರೆ. ನಿಮ್ಮ ಘನಂದಾರಿ ಕಾರ್ಯವೈಖರಿ ಬಗ್ಗೆ ಹೇಳುತ್ತಾ ಹೋದರೆ ಇನ್ನೂ ದೊಡ್ಡ ಪಟ್ಟಿಯೇ ಇದೆ.

ಮನೆಯ ಯಜಮಾನ ಸರಿ ಇಲ್ಲದೆ ಹೋದರೆ ಹೇಗೆ ಸಂಸಾರ ಬೀದಿಗೆ ಬರುತ್ತದೋ ಅದೇ ರೀತಿ ಒಂದು ಸರ್ಕಾರದಲ್ಲಿ ಮುಖ್ಯಮಂತ್ರಿಗೆ ಹಿಡಿತ ಇಲ್ಲದೆ ಹೋದರೆ ಆಡಳಿತ ಯಂತ್ರ ಹಳ್ಳ ಹಿಡಿಯುತ್ತದೆ. ಮುಖ್ಯಮಂತ್ರಿ ಮಾತಿಗೆ ಸಚಿವರೇ ಕಿಮ್ಮತ್ತು ಕೊಡುತ್ತಿಲ್ಲ ಎಂದರೆ ಆಡಳಿತಶಾಹಿಯಲ್ಲಿ ಗೊಂದಲ ಮೂಡಿಸುತ್ತದೆ ಎಂದಿದ್ದಾರೆ.

ಆದ್ದರಿಂದ ಮೊದಲು ನಿಮ್ಮ ಸಚಿವ ಸಂಪುಟ ಸಚಿವರಿಗೆ ನಿಮ್ಮ ಮಾತು, ಆದೇಶ ಪಾಲನೆ ಮಾಡುವಂತೆ ಕ್ಲಾಸ್ ತೆಗೆದುಕೊಂಡು ತಾಕೀತು ಮಾಡಿ. ಕೆಲಸ ಮಾಡದ ಸೋಮಾರಿ ಸಚಿವರನ್ನು ಸಂಪುಟದಿಂದ ಕಿತ್ತು ಬಿಸಾಕಿ ಸಮರ್ಥರನ್ನು ತೆಗೆದುಕೊಳ್ಳಿ. ಇಷ್ಟಕ್ಕೂ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂಬ ನಿಮ್ಮ ಬೇಡಿಕೆಗೆ ಹೈಕಮಾಂಡ್ ಯಾಕೆ ಸೊಪ್ಪು ಹಾಕುತ್ತಿಲ್ಲ? ಇದು ತಾವು outgoing ಸಿಎಂ ಎಂಬುದಕ್ಕೆ ಪರೋಕ್ಷ ಸೂಚನೆಯೋ? ಅಥವಾ ಹೇಗಿದ್ದರೂ ಮುಖ್ಯಮಂತ್ರಿ ಬದಲಾವಣೆ ಆಗಲಿದೆ, ಈಗ ಸಂಪುಟ ವಿಸ್ತರಣೆ/ಪುನಾರಾಚನೆ ಯಾಕೆ ಎಂದು ಸುಮ್ಮನಿದ್ದಾರೋ? ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com