

ಬೆಂಗಳೂರು/ನವದೆಹಲಿ: ರಾಜ್ಯ ರಾಜಕೀಯದಲ್ಲಿ "ನವೆಂಬರ್ ಕ್ರಾಂತಿ" ಭಾರಿ ಸದ್ದು ಮಾಡುತ್ತಿದೆ. ಆದರೆ ನಾಯಕತ್ವ ಬದಲಾವಣೆಯ ಈ ಕ್ರಾಂತಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, 2028 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ ಮಾತ್ರ ಕ್ರಾಂತಿ ಎಂದು ಗುರುವಾರ ಹೇಳಿದ್ದಾರೆ.
ತಾವು ಪಕ್ಷದ "ಶಿಸ್ತಿನ ಸಿಪಾಯಿ" ಎಂದು ಹೇಳಿಕೊಂಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್, ತಾವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು.
ಈ ತಿಂಗಳು ಕಾಂಗ್ರೆಸ್ ಸರ್ಕಾರ ಎರಡೂವರೆ ವರ್ಷ ಪೂರ್ಣಗೊಳಿಸಲಿದ್ದು, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಊಹಾಪೋಹಗಳಿವೆ. ಇದನ್ನೇ "ನವೆಂಬರ್ ಕ್ರಾಂತಿ" ಎಂದು ಕರೆಯಲಾಗುತ್ತಿದೆ.
ನಾನು (ಹೈಕಮಾಂಡ್) ಯಾರನ್ನೂ ಭೇಟಿಯಾಗುತ್ತಿಲ್ಲ. ಸಚಿವ ಸಂಪುಟ ಪುನರ್ರಚನೆ ಬಗ್ಗೆ ನನ್ನೊಂದಿಗೆ ಯಾವುದೇ ಚರ್ಚೆ ನಡೆದಿಲ್ಲ. ಅದು ಸಿಎಂ ಅವರ ವಿಶೇಷ ಹಕ್ಕು. ಅವರು ಅದನ್ನು ಮಾಡಲಿ ಎಂದರು.
ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ, ನನಗೆ ಯಾವುದೇ ನಾಯಕರನ್ನು ಭೇಟಿ ಮಾಡುವ ಕಾರ್ಯಕ್ರಮ ಇಲ್ಲ. ಪಕ್ಷ ಸಂಘಟನೆ ವಿಚಾರವಾಗಿ ಚರ್ಚೆ ಮಾಡಲಾಗುವುದು. ಮತಗಳ್ಳತನ ವಿಚಾರವಾಗಿ ನಿನ್ನೆ ರಾತ್ರಿಯೂ ಸಭೆ ಮಾಡಿದ್ದೇವೆ, ಇಂದು ಸಭೆ ಮಾಡಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ನಾನು ಏನಾದರೂ ಹೇಳಿದ್ದೇನಾ? ಸಿಎಂ ಏನಾದರೂ ಹೇಳೀದ್ದಾರಾ? ಪಕ್ಷ ಏನು ಹೇಳುತ್ತದೆಯೋ ಅದನ್ನು ಕೇಳಿಕೊಂಡು ಹೋಗುತ್ತೇವೆ ಎಂದರು.
ಪಕ್ಷವು ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷಗಳ ಕಾಲ ಇರಬೇಕೆಂದು ಹೇಳಿದರೆ, ಅವರು ಐದು ವರ್ಷಗಳ ಕಾಲ ಇರುತ್ತಾರೆ. ಅವರು ಹತ್ತು ವರ್ಷಗಳ ಕಾಲ ಇರಬೇಕಾದರೆ, ಅವರು ಹತ್ತು ವರ್ಷಗಳ ಕಾಲ ಇರುತ್ತಾರೆ. 15 ವರ್ಷಗಳ ಕಾಲ ಇದ್ದರೆ, ಅವರು 15 ವರ್ಷಗಳ ಕಾಲ ಇರುತ್ತಾರೆ. ನಮಗೆ (ಪಕ್ಷದಿಂದ) ನೀಡಿದ ಕರ್ತವ್ಯವನ್ನು ನಾವು ನಿರ್ವಹಿಸುತ್ತೇವೆ" ಎಂದು ಹೇಳಿದರು.
ನವೆಂಬರ್ ಕ್ರಾಂತಿಯ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, "ನವೆಂಬರ್ ಅಥವಾ ಡಿಸೆಂಬರ್ ಅಥವಾ ಜನವರಿ ಅಥವಾ ಫೆಬ್ರವರಿಯಲ್ಲಿ ಯಾವುದೇ ಕ್ರಾಂತಿ ಆಗುವುದಿಲ್ಲ. ಕ್ರಾಂತಿ ಆಗುವುದು ಏನಿದ್ದರೂ 2028 ರಲ್ಲಿ. ಅದು ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ ಮಾತ್ರ ಕ್ರಾಂತಿಯಾಗುತ್ತದೆ" ಎಂದರು.
ನವೆಂಬರ್ ಕ್ರಾಂತಿ ಹಾಗೂ ಈ ತಿಂಗಳು 22 ಹಾಗೂ 26 ರ ದಿನಾಂಕದ ಬಗ್ಗೆ ಚರ್ಚೆಯಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, "ಯಾರೋ ಸುಮ್ಮನೆ ಅದನ್ನು ಹಾಗೆ ಬರೆದಿದ್ದಾರೆ... ಯಾವುದೇ ಕ್ರಾಂತಿ ಇರುವುದಿಲ್ಲ" ಎಂದರು.
Advertisement