

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಚರ್ಚೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವುದರ ನಡುವೆ ಭಾರತೀಯ ಜನತಾ ಪಕ್ಷ(ಬಿಜೆಪಿ) ಭಾನುವಾರ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ಎಕ್ಸ್‌ನಲ್ಲಿ ಎಐ ವಿಡಿಯೋ ಬಿಡುಗಡೆ ಮಾಡಿದ್ದು, ಭಾರಿ ವೈರಲ್ ಆಗಿದೆ.
"ಇದು ಡಿಕೆ ಶಿವಕುಮಾರ್ ಅವರಿಗೆ 'ನೋ ಚೇರ್ ನವೆಂಬರ್'" ಎಂಬ ಶೀರ್ಷಿಕೆಯೊಂದಿಗೆ ಬಿಜೆಪಿ ಕರ್ನಾಟಕ ಎಐ ವಿಡಿಯೋವನ್ನು ಹಂಚಿಕೊಂಡಿದೆ."
AI- ವಿಡಿಯೋದಲ್ಲಿ ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರ ಮೊಬೈಲ್ ನಿಂದ ಡಿಕೆ ಶಿವಕುಮಾರ್ ಅವರಿಗೆ ವಾಟ್ಸಾಪ್‌ನಲ್ಲಿ "ಹಾಯ್" ಕಳುಹಿಸುತ್ತಿರುವುದನ್ನು ತೋರಿಸಲಾಗಿದೆ. ಇದರ ನಂತರ "ಸ್ಕ್ರ್ಯಾಚ್" ಕಾರ್ಡ್ ಬರುತ್ತದೆ.
ಡಿಕೆ ಶಿವಕುಮಾರ್ ಅವರು ಆ ಸ್ಕ್ರ್ಯಾಚ್ ಕಾರ್ಡ್ ಅನ್ನು ಗೀಚುತ್ತಿದ್ದಂತೆ, ಅವರಿಗೆ "ನೋ ಚೇರ್ ನವೆಂಬರ್" ಬಹುಮಾನವಾಗಿ ಸಿಗುತ್ತದೆ. ನಂತರ ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ನಗುತ್ತಿರುವುದು ಕಂಡುಬರುತ್ತದೆ.
ಬಿಹಾರ ಚುನಾವಣೆಯ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಸಂಪುಟ ಪುನರ್ರಚನೆ ಕುರಿತು ಚರ್ಚಿಸುವುದಾಗಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
"ಬಿಹಾರ ಚುನಾವಣೆಯ ನಂತರ ರಾಹುಲ್ ಗಾಂಧಿ ಮತ್ತು ಖರ್ಗೆ ಅವರೊಂದಿಗೆ ಸಂಪುಟ ಪುನರ್ರಚನೆ ಕುರಿತು ಚರ್ಚಿಸುತ್ತೇನೆ... ಜನರು ಏನು ಬೇಕಾದರೂ ಹೇಳಬಹುದು. ಹೈಕಮಾಂಡ್ ಯಾರು? ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅಥವಾ ಮಲ್ಲಿಕಾರ್ಜುನ ಖರ್ಗೆ ಏನಾದರೂ ಹೇಳಿದ್ದಾರೆಯೇ? ಜನರಿಗಿಂತ ಹೆಚ್ಚಾಗಿ, ಮಾಧ್ಯಮಗಳು ಇದರ ಬಗ್ಗೆ ಚರ್ಚಿಸುತ್ತಿವೆ. ಹೈಕಮಾಂಡ್ ಹೊರತುಪಡಿಸಿ, ಇತರರು ಏನು ಹೇಳುತ್ತಾರೆ ಎಂಬುದು ಮುಖ್ಯವಲ್ಲ" ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
Advertisement